ಬೆಂಗಳೂರು: ಬಿಜೆಪಿಯ ರೆಬೆಲ್ ನಾಯಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ತೆರಳುವ ಮೂಲಕ ಮತ್ತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯಕ್ಕೆ ನೀರೆರೆದಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿಗೆ ಪ್ರಯಾಣಿಸಿರುವ ಯತ್ನಾಳ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಗೊಂದಲ ಪರಿಹಾರಕ್ಕೆ ರಾಜ್ಯಕ್ಕೆ ಆಗಮಿಸಿದ್ದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರನ್ನು ಭೇಟಿಯಾಗಲು ನಿರಾಕರಿಸಿದ್ದ ಯತ್ನಾಳ್, ಇದೀಗ ನೇರವಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದ ಸಚಿವ ಮುರುಗೇಶ್ ನಿರಾಣಿ ಕೂಡ ಇನ್ನು ದೆಹಲಿಯಲ್ಲಿಯೇ ಇದ್ದಾರೆ. ನಾಯಕತ್ವ ಬದಲಾವಣೆ ವಿಷಯದ ಚರ್ಚೆ ವೇಳೆ ಸಿಎಂ ಸ್ಥಾನಕ್ಕೆ ನಿರಾಣಿ ಹೆಸರು ಕೂಡು ಕೇಳಿಬರುತ್ತಿತ್ತು. ಹಾಗಾಗಿ ಯತ್ನಾಳ್, ನಿರಾಣಿ ಇಬ್ಬರೂ ದೆಹಲಿಯಲ್ಲಿರುವುದು ತೀವ್ರ ಕುತೂಹಲ ಮೂಡುವಂತೆ ಮಾಡಿದೆ.
ಯತ್ನಾಳ್ ದೆಹಲಿಗೆ ತೆರಳುತ್ತಿದ್ದಂತೆ ಸಿಎಂ ಆಪ್ತ ಶಾಸಕರು ರೇಣುಕಾಚಾರ್ಯ ನೇತೃತ್ವದಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ. ಸಭೆ ನಡೆಸದಂತೆ ಅರುಣ್ ಸಿಂಗ್ ಸೂಚನೆ ಹಿನ್ನಲೆ ಗೌಪ್ಯವಾಗಿ ಒಂದೆಡೆ ಸೇರಿಕೊಂಡು ಮಾತುಕತೆ ನಡೆಸಿದ್ದಾರೆ. ಯತ್ನಾಳ್ ತಂತ್ರಕ್ಕೆ ಪ್ರತಿತಂತ್ರದ ಕುರಿತು ಚರ್ಚಿಸಲಾಗಿದೆ. ಯಡಿಯೂರಪ್ಪ ಪರವಾಗಿ ನಿಲ್ಲಬೇಕು, ಯತ್ನಾಳ್ ತಂಡದ ವಿರುದ್ಧ ನಾವೂ ಹೈಕಮಾಂಡ್ಗೆ ದೂರು ನೀಡಬೇಕು ಎಂದು ಚರ್ಚೆ ನಡೆಸಲಾಯಿತು ಎನ್ನಲಾಗಿದೆ.