ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಇಂಡಿಯನ್' 2 ಚಿತ್ರೀಕರಣ ಹಲವಾರು ಕಾರಣಗಳಿಗಾಗಿ ವಿಳಂಬವಾಗುತ್ತಲೇ ಇದೆ. ಕಳೆದ ವರ್ಷದ ಲಾಕ್‌ಡೌನ್‌ನಿಂದಾಗಿ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿತ್ತು. ಆದರೆ, ಈವರೆಗೆ ಮತ್ತೇ ಚಿತ್ರೀಕರಣಕ್ಕೆ ಕೈ ಹಾಕಿರಲಿಲ್ಲ. ಈ ಹಿನ್ನೆಲೆ ನಿರ್ದೇಶಕ ಶಂಕರ್ ಮತ್ತು ಲೈಕಾ ಪ್ರೊಡಕ್ಷನ್ಸ್ ನಡುವಿನ ಬಿರುಕಿಗೆ ಕಾರಣವಾಗಿದೆ.
ಇದರ ನಡುವೆ ಶಕರ್ ತೆಲುಗು ಸ್ಟಾರ್ ರಾಮ್ ಚರಣ್ ಅವರೊಂದಿಗೆ ಕೈಜೋಡಿಸಿದ್ದಾರೆ. ಹಾಗೆ ಇತ್ತೀಚೆಗೆ "ಅನ್ನಿಯನ್" ಚಲನಚಿತ್ರ ರಿಮೇಕ್ಗಾಗಿ ಬಾಲಿವುಡ್ ನಾಯಕ ರಣವೀರ್ ಸಿಂಗ್ ಅವರನ್ನು ಬುಕ್ ಮಾಡಿದ್ದಾರೆ. ಈ ಎಲ್ಲ ಕಾರಣಕ್ಕೆ ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಚಿತ್ರ ಪೂರ್ಣಗೊಳ್ಳುವ ಮುನ್ನ ಬೇರೆ ಯಾವುದೇ ಚಿತ್ರವನ್ನು ನಿರ್ದೇಶಿಸುವುದನ್ನು ನಿಷೇಧಿಸುವಂತೆ ಕೋರಿ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಿರ್ದೇಶಕ ಶಂಕರ್ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ.
ಪ್ರೊಡಕ್ಷನ್ ಹೌಸ್ ತನ್ನನ್ನು ಇತರ ಚಲನಚಿತ್ರಗಳನ್ನು ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ನಿರ್ದೇಶಕ ಶಂಕರ್ ಹೇಳಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶರು, ಎರಡೂ ಕಡೆಯವರು ಒಗ್ಗೂಡಿ ಸಮಸ್ಯೆ ಬಗೆಹರಿಸಲು ನಿರ್ದೇಶಿಸಿದೆ.
ಇನ್ನು ಈ ಚಿತ್ರದಲ್ಲಿ ಅಭಿನಯಿಸಬೇಕಿದ್ದ ಸ್ಟಾರ್ ಹಾಸ್ಯನಟ ಇತ್ತೀಚೆಗೆ ನಿಧನ ಹೊಂದಿದ ಕಾರಣ ನಟ ವಿವೇಕ್ ಇರುವ ಭಾಗಗಳನ್ನು ಮತ್ತೆ ಚಿತ್ರೀಕರಿಸುವ ಅಗತ್ಯವಿದೆ ಎಂದು ನಿರ್ದೇಶಕ ಶಂಕರ್ ಅವರ ವಕೀಲರು ಹೇಳಿದ್ದಾರೆ. ಬರುವ ಜೂನ್ ನಿಂದ ಅಕ್ಟೋಬರ್ ವರೆಗೆ ಐದು ತಿಂಗಳಲ್ಲಿ ಶಂಕರ್ ಶೂಟಿಂಗ್ ಪೂರ್ಣಗೊಳಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಏಪ್ರಿಲ್ 28 ಕ್ಕೆ ಮುಂದೂಡಿದೆ.