ಹರಿದ್ವಾರ: ಅಲೋಪತಿಯನ್ನು 'ಅವಿವೇಕಿ ವಿಜ್ಞಾನ' ಎಂದು ಕರೆದಿದ್ದ ರಾಮ್‌ದೇವ್ ಈಗ ಉಲ್ಟಾ ಹೊಡೆದಿದ್ದಾರೆ. ರಾಮದೇವ್ ಅವರು ಅಲೋಪತಿ ಔಷಧಗಳು ಮತ್ತು ಕೋವಿಡ್ ಬಗ್ಗೆ ಮಾಡಿದ ಪ್ರತಿಕ್ರಿಯೆಗಳು ದೇಶದಲ್ಲಿ ಭಾರಿ ವಿವಾದವನ್ನೇ ಹುಟ್ಟು ಹಾಕಿದ್ದವು. ಆದರೆ, ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕ ಸಮಾರಂಭದಲ್ಲಿ ಅವರು ಮೊದಲ ಬಾರಿಗೆ ಮಾಸ್ಕ್ ಧರಿಸಿರುವುದು ಕಂಡು ಬಂದಿದೆ. ಇನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಾಬಾ ವಿರುದ್ಧ ಕೇಂದ್ರ ಆರೋಗ್ಯ ಸಚಿವಾಲಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪತಂಜಲಿ, ಅವರ ವಿರುದ್ಧದ ಆರೋಪಗಳನ್ನು ನಿರಾಕರಿಸಿದೆ. ಹಾಗೆ ಅವರು ಕೇವಲ ಫಾರ್ವರ್ಡ್ ಮಾಡಿದ ವಾಟ್ಸ್ಆ್ಯಪ್ ಸಂದೇಶವನ್ನು ಮಾತ್ರ ಓದಿದ್ದಾರೆ.
ಆದ್ದರಿಂದ ಈ ವಿವಾದ ಉಂಟಾಯಿತು ಎಂದು ಸಮಜಾಯಿಷಿ ನೀಡಿದೆ. ಹಾಗೆಯೇ ಇವರ ಹೇಳಿಕೆಗೆ ವಿರೋಧ ಭುಗಿಲೆದ್ದ ಕಾರಣಕ್ಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪತ್ರ ಬರೆದ ನಂತರ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದರು.
ಯೋಗ ಮತ್ತು ವ್ಯಾಯಾಮವನ್ನು ಸರಿಯಾಗಿ ಮಾಡುತ್ತಿರುವುದರಿಂದ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಈ ಹಿಂದೆ ಬಾಬಾ ಹೇಳಿದ್ದರು. ಆದರೆ, ಇಂದು ಮಾಧ್ಯಮಗಳ ಜೊತೆ ಮಾತನಾಡುವಾಗ, ಅವರು ಯು-ಟರ್ನ್ ತೆಗೆದುಕೊಂಡಿದ್ದಾರೆ. ಶೀಘ್ರದಲ್ಲೇ ಲಸಿಕೆ ಪಡೆಯುವುದಾಗಿ ಹೇಳಿದ್ದು, ವೈದ್ಯರು ನಮಗೆ ದೇವರಂತೆ. ನನ್ನ ಹಿಂದಿನ ಹೇಳಿಕೆ ಎಲ್ಲಾ ವೈದ್ಯರಿಗೂ ಅನ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ಪತಂಜಲಿಯ ಕೊರೊನಿಲ್ ನೇಪಾಳದಲ್ಲಿ ಬಳಕೆ ಪ್ರಮಾಣ ಸತತವಾಗಿ ಇಳಿಯುತ್ತಿದ್ದು, ವಿತರಣಾ ನಿಷೇಧವನ್ನು ಎದುರಿಸುತ್ತಿದೆ. ಹಿಮಾಲಯ ರಾಷ್ಟ್ರಗಳ ಆಯುರ್ವೇದ ಮತ್ತು ಪರ್ಯಾಯ ಔಷಧ ಇಲಾಖೆಯು ಯೋಗ ಗುರು ರಾಮದೇವ್ ಅವರ ಪತಂಜಲಿ ಗ್ರೂಫ್ ತಯಾರಿಸಿದ ಇಮ್ಯೂನಿಟಿ ಬೂಸ್ಟರ್ ಕಿಟ್ ಎಂದು ಕರೆಯಲ್ಪಡುವ ಕೊರೊನಿಲ್ನ್ನು ವಿತರಣೆಯನ್ನು ನಿಷೇಧಿಸಿದ ನಂತರ ನೇಪಾಳದಲ್ಲಿ ವಿವಾದಕ್ಕೆ ಇಳಿದಿದೆ.
ಆದಾಗ್ಯೂ, ನೇಪಾಳದ ಆರೋಗ್ಯ ಸಚಿವಾಲಯವು ಕೊರೊನಿಲ್ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ಮೌನವಹಿಸಿದೆ. ಹಾಗೆ ಭಾರತ ಮತ್ತು ಭೂತಾನ್‌ನಲ್ಲೂ ವಿವಾದಕ್ಕೆ ಇಳಿದಿದೆ.
ಕಳೆದ ಗುರುವಾರ ಪತಂಜಲಿ ಯೋಗಪೀಠವು ಕೋಟ್ಯಂತರ ಮೌಲ್ಯದ ಕೊರೊನಿಲ್ ಕಿಟ್‌ಗಳು, ಸ್ಯಾನಿಟೈಸರ್ಗಳು, ಮಾಸ್ಕ್ ಮತ್ತು ಇತರ ರೋಗನಿರೋಧಕ ಔಷಧಿಗಳನ್ನು ಆರೋಗ್ಯ ಸಚಿವ ಹೃದಯೇಶ್ ತ್ರಿಪಾಠಿ ಅವರಿಗೆ ಹಸ್ತಾಂತರಿಸಿದ ನಂತರ ನೇಪಾಳದಲ್ಲಿ ಈ ವಿವಾದ ಭುಗಿಲೆದ್ದಿದೆ. ಇನ್ನು ಪತಂಜಲಿ ಯೋಗಪೀಠದ ಸ್ಥಳೀಯ ಅಧಿಕಾರಿಗಳಿಂದ ಬೆಂಬಲ ಪಡೆದ ಮರುದಿನವೇ ತ್ರಿಪಾಠಿಯನ್ನು ಆರೋಗ್ಯ ಸಚಿವ ಸ್ಥಾನದಿಂದ ತೆಗೆದುಹಾಕಲಾಯಿತು.