ಬೆಂಗಳೂರು: ಆರೋಗ್ಯ ಸಚಿವ ಸುಧಾಕರ್ ವಿರುದ್ಧ ರಾಜ್ಯ ಕಾಂಗ್ರೆಸ್ ಪಕ್ಷ ವಿನೂತನ ಚಳವಳಿ ಆರಂಭಿಸಿದೆ.
ಕೋವಿಡ್-19 ನಿಯಂತ್ರಣದಲ್ಲಿ ವೈಫಲ್ಯ, ಆರೋಗ್ಯದ ಹೆಸರಿನಲ್ಲಿ ಭ್ರಷ್ಟಾಚಾರ ಹಾಗೂ ಚಾಮರಾಜನಗರದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರೋಗಿಗಳು ಸಾವನ್ನಪ್ಪಿರುವ ವಿಚಾರವಾಗಿ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧರಿಸಿರುವ ಕಾಂಗ್ರೆಸ್ ಪಕ್ಷ ವಿನೂತನ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ 'ರಿಸೈನ್ ಸುಧಾಕರ್' ಎಂಬ ಅಭಿಯಾನ ಆರಂಭಿಸಿದೆ.
ಕಾಂಗ್ರೆಸ್ ಪಕ್ಷ ಆರಂಭಿಸಿರುವ ಈ ಅಭಿಯಾನಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ದೇಶಾದ್ಯಂತ 11 ಲಕ್ಷ ಮಂದಿ ಟ್ವೀಟ್ ಬಳಕೆದಾರರರು ಸುಧಾಕರ್ ರಾಜೀನಾಮೆಗೆ ಒತ್ತಾಯಿಸುವ ಕಾಂಗ್ರೆಸ್ ಅಭಿಯಾನವನ್ನು ಬೆಂಬಲಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕಾರಣರಾದ 17 ನಾಯಕರಲ್ಲಿ ಒಬ್ಬರಾಗಿರುವ ಸುಧಾಕರ್ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿರುವ ಕಾಂಗ್ರೆಸ್, ಈಗ ಆರೋಗ್ಯ ಸಚಿವರಾಗಿರುವ ಸುಧಾಕರ್ ವಿರುದ್ಧ ಒಂದು ಅಭಿಯಾನ ಮೂಲಕವೂ ಮುಜುಗರ ತರುವ ಕಾರ್ಯ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ಸರ್ಕಾರ ಯಾವ ರೀತಿಯ ಬೆಲೆ ಕೊಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.