ಬೆಂಗಳೂರು: ಜೆಡಿಎಸ್ ಬೆಂಗಳೂರು ನಗರ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಹೆಚ್. ಚಂದ್ರಶೇಖರ್ ಇಂದು ಜೆಡಿಎಸ್ ಪಕ್ಷವನ್ನು ತೊರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಸಂಜೆ ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರದಲ್ಲಿರುವ ಚಂದ್ರಶೇಖರ್ ಅವರ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಜೆಡಿಎಸ್ನ ಹಲವು ಪದಾಧಿಕಾರಿಗಳು ಮತ್ತು ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗ್ತಿದೆ.
ಈ ಸಂದರ್ಭದಲ್ಲಿ ಶಾಸಕಿ ಸೌಮ್ಯ ರೆಡ್ಡಿ, ರಾಜರಾಜೇಶ್ವರಿ ನಗರ ಅಭ್ಯರ್ಥಿ ಕುಸುಮಾ, ಮುಖಂಡರಾದ ಹನುಮಂತರಾಯಪ್ಪ ಸೇರಿದಂತೆ ಅನೇಕ ಶಾಸಕರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿರುತ್ತಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಸಾಕಷ್ಟು ನಾಯಕರು ಜೆಡಿಎಸ್ ತೊರೆದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ಗೆ ದೊಡ್ಡ ಹೊಡೆತ ಬೀಳುತ್ತಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಹಲವು ನಾಯಕರು ತಮ್ಮ ಬೆಂಬಲಿತ ಕಾರ್ಯಕರ್ತರ ಜೊತೆ ಬೇರೆ ಪಕ್ಷವನ್ನು ಸೇರುತ್ತಿದ್ದಾರೆ.