ಮೈಸೂರು: ಸಾವರ್ಕರ್ಗೆ ಬಗ್ಗೆ ನಾನು ಹೇಳಿದ ಮಾತು ಸತ್ಯವಾಗಿದೆ. ಆದರಿಂದಲೇ ಬಿಜೆಪಿಯವರು ನನ್ನ ಮೇಲೆ ಮುಗಿ ಬೀಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಲ್ಲಿನ ರಾಮಕೃಷ್ಣ ನಗರದಲ್ಲಿರುವ ನೃಪತುಂಗ ಶಾಲೆಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ಭಾರತರತ್ನ ಕೊಡಲು ನನ್ನ ವಿರೋಧವಿಲ್ಲ. ಆದ್ರೆ ಹಿಂದುತ್ವವಾದ ಮೂಲಕ ಕೋಮುಭಾವನೆ ಕೆರಳಿಸುವ ವ್ಯಕ್ತಿಗಳಿಗೆ ಕೊಡುವುದು ತಪ್ಪು. ಡಾ. ಶಿವಕುಮಾರ್ ಸ್ವಾಮೀಜಿಗೆ ಭಾರತ ರತ್ನ ಕೊಡಲಿ ಎಂದು ಆಗ್ರಹಿಸಿದರು.
ಇನ್ನು, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆತ ಯಕಶ್ಚಿತ್ ರಾಜಕಾರಣಿ. ಆತನ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಕುಟುಕಿದರು.
ವಿಧಾನಸಭಾ ಕಲಾಪಗಳಿಗೆ ಮಾಧ್ಯಮಗಳನ್ನು ದೂರ ಮಾಡಿ ಬಿಜೆಪಿ ಅವರು ತಮ್ಮ ಹುಳುಕುಗಳನ್ನು ಮುಚ್ಚಿಕೊಂಡು, ಪಾರದರ್ಶಕ ಆಡಳಿತ ನೀಡದೆ ಮರೆಮಾಚುತ್ತಿದ್ದಾರೆ. ಅವರಿಗೆ ಪಾರದರ್ಶಕ ಆಡಳಿತ ಬೇಕಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜಾತಿ ಸಮೀಕ್ಷೆ ವರದಿ ರೆಡಿಯಾಗಿದೆ. ಆದರೆ ಬಿಡುಗಡೆಯಾಗಿಲ್ಲ. ವರದಿಯಿಂದ ಎಲ್ಲ ವರ್ಗಗಳಿಗೆ ಅನುಕೂಲವಾಗುತ್ತದೆ ಎಂದರು.
ರಾಜ್ಯಕ್ಕೆ 1200 ಕೋಟಿ ನೆರೆ ಪರಿಹಾರ ಸಾಲುವುದಿಲ್ಲ. ಅದರ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರದಿಂದ ಕೇಳಬೇಕು. ನೆರೆ ಹಣ ಪಡೆಯಲು ಬೋಗಸ್ ದಾಖಲೆ ಸೃಷ್ಟಿಸುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿಯಾಗಬೇಕೆಂದು ಜನ ನಿರ್ಧರಿಸಿದರೆ ಆಗುವೆ. ಇಲ್ಲವಾದರೆ ಹೀಗೆ ಇರುತ್ತೇನೆ. ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.