ತಿರುವನಂತಪುರಂ: ಕೇರಳದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಲೇ ಇದೆ. ಈ ನಡುವೆ ರಾಜ್ಯ ಪೊಲೀಸರು ಸೈಬರ್ ಗಸ್ತು ಪ್ರಾರಂಭಿಸಿದ್ದಾರೆ. ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡುವವರನ್ನು ಕಂಡುಹಿಡಿಯಲು ಈ ನಿರ್ಧಾರ ಕೈಗೊಂಡಿದ್ದಾರೆ.
ಸಾಂಕ್ರಾಮಿಕ ರೋಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಎಚ್ಚರಿಕೆ ರವಾನಿಸಿದ್ದಾರೆ.
ಕೊರೊನಾ ಬಗ್ಗೆ ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಸಾಕಷ್ಟು ಅನಧಿಕೃತ ಮತ್ತು ಅವೈಜ್ಞಾನಿಕ ವಿಷಯವನ್ನು ಪ್ರಚಾರ ಮಾಡುತ್ತಿದ್ದಾರೆ. ಇಂತಹ ನಕಲಿ ಸುದ್ದಿಗಳನ್ನು ಸೃಷ್ಟಿಸುವುದಲ್ಲದೇ ಅದನ್ನು ಹಂಚಿಕೊಳ್ಳುವುದು ಕೂಡ ಅಪರಾಧ ಎಂದು ಡಿಜಿಪಿ ಎಚ್ಚರಿಸಿದ್ದಾರೆ.
ಈ ಎಲ್ಲಾ ಘಟನೆ ಹಿನ್ನೆಲೆ ಪೊಲೀಸ್ ಪ್ರಧಾನ ಕಚೇರಿಯಲ್ಲಿನ ಹೈಟೆಕ್ ಅಪರಾಧ ವಿಚಾರಣಾ ಘಟಕ ಮತ್ತು ಸೈಬರ್ ಭದ್ರತೆಯಲ್ಲಿ 'ಸೈಬರ್ ಗಸ್ತು' ಆರಂಭಿಸಲಾಗಿದೆ. ಈ ಮೂಲಕ ವದಂತಿಗಳನ್ನು ರಚಿಸುವ ಮತ್ತು ಹಂಚಿಕೊಳ್ಳುವವರನ್ನು ಬಂಧಿಸಲು ಸಾಮಾಜಿಕ ಮಾಧ್ಯಮದಲ್ಲಿ ಗಸ್ತು ನಡೆಸಲಾಗುತ್ತಿದೆ.