ದೊಡ್ಡಬಳ್ಳಾಪುರ : ಸಿಆರ್ಪಿಎಫ್ ಯೋಧರಾಗಿರುವ ಇವರು ಕೋಬ್ರಾ ತರಬೇತಿ ಪಡೆದು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೈನಿಕನಾಗಿ ದೇಶ ಸೇವೆ ಮಾಡುತ್ತಿದ್ದಾರೆ, ರಜೆಯಲ್ಲಿ ಊರಿಗೆ ಬಂದಾಗ ಸೇನೆಗೆ ಸೇರುವ ಹುಡುಗರಿಗೆ ತರಬೇತಿಯನ್ನು ನೀಡುವ ಮೂಲಕ ಮುಂದಿನ ಪೀಳಿಗೆಗೆ ಯೋದರನ್ನು ಹುಟ್ಟುಹಾಕುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಸಾಮಾನ್ಯ ರೈತಾಪಿ ಕುಟುಂಬ ದ ಹುಡುಗ ಅನಂತ್ ರಾಜ್ ಗೋಪಾಲ್ ಈ ಕಾರ್ಯ ಮಾಡುತ್ತಿರುವವರು. ಸದ್ಯ ಇವರು ಛತೀಸ್ ಘಡದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಯೋಧನಾಗಿ ದೇಶ ಸೇವೆ ಮಾಡುತ್ತಿದ್ದಾರೆ.
1999 ರಲ್ಲಿ ನಡೆದ ಕಾರ್ಗಿಲ್ ಯುದ್ಧ ಮತ್ತು ತಮ್ಮ ಗ್ರಾಮದ ರಾಘವೇಂದ್ರ ಎಂಬುವರು ಸೈನಿಕನಾಗಿ ದೇಶ ಸೇವೆ ಮಾಡುತ್ತಿದ್ದು, ಇವರಿಗೆ ಭಾರತೀಯ ಸೇನೆಗೆ ಸೇರಲು ಪ್ರೇರಣೆಯಾಯಿತಂತೆ. ತಮ್ಮ 19 ನೇ ವಯಸ್ಸಿನಲ್ಲಿ ಸಿಆರ್ ಪಿಎಫ್ ಗೆ ಸೈನಿಕನಾಗಿ ಆಯ್ಕೆ ಯಾದ ಇವರು, ಮೊದಲಿಗೆ ಹೈದರಾಬಾದ್ ನಲ್ಲಿ ತರಬೇತಿ ಪಡೆದ ಅವರು ಅನಂತರ ಕಾಶ್ಮೀರ, ಅಸ್ಸೋಂ, ಮಣಿಪುರದಲ್ಲಿ ಕೆಲಸ ಮಾಡಿದ್ದು, ಈಗ ಛತ್ತಿಸ್ ಘಡದಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಮಾಂಡೋ ಬಟಾಲಿಯನ್ ಪಾರ್ ರೆಸಲ್ಯೂಟ್ ಆ್ಯಕ್ಶನ್ (ಕೋಬ್ರಾ) ತರಬೇತಿ ಪಡೆದಿರುವ ಅನಂತ್ , ನಕ್ಸಲ್ ಪೀಡಿತ ಪ್ರದೇಶ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ರಜೆ ಮೇಲೆ ಬಂದಾಗ ತರಬೇತಿ:
19 ವರ್ಷ ಭಾರತೀಯ ಸೈನಿಕನಾಗಿ ಸೇವೆ ಮಾಡಿರುವ ಅನಂತ್ ರಾಜ್ ಗೋಪಾಲ್ ರಜೆಯ ಮೇಲೆ ಊರಿಗೆ ಬಂದರೂ ಕೂಡ ದೇಶಕ್ಕಾಗಿ ಏನಾದರು ಮಾಡುವ ತುಡಿತ ಅವರಲ್ಲಿತ್ತು, ಪ್ರತಿನಿತ್ಯ ಬೆಳಗ್ಗೆ ತೂಬಗೆರೆ ಸರ್ಕಾರಿ ಫ್ರೌಡ ಶಾಲೆಯ ಮೈದಾನದಲ್ಲಿ ಕೆಲವು ಹುಡುಗರು ಸೇನೆ ಮತ್ತು ಪೊಲೀಸ್ ಇಲಾಖೆ ಸೇರಲು ರನ್ನಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರು, ಈ ಯುವಕರು ಜೊತೆ ಸೇರಿದ ಅನಂತ್, ಕ್ರಮೇಣವಾಗಿ ಸೇನೆಗೆ ಸೇರಲು ಬೇಕಾದ ತರಬೇತಿಯನ್ನು ನೀಡಲು ಪ್ರಾರಂಭಿಸಿದರು.
ತಾವು ಸೇನೆಯಲ್ಲಿ ಕಲಿತ ವಿದ್ಯೆಯನ್ನು ಯುವಕರಿಗೆ ಕಲಿಸಿದ್ದಾರೆ. ಪ್ರಾರಂಭದಲ್ಲಿ 8 ಜನರಿಂದ ಯುವಕರು ಈಗ 40 ಯುವಕರಿದ್ದಾರೆ, ರನ್ನಿಂಗ್, ಹೈಜಂಪ್, ಲಾಂಗ್ ಜಂಪ್ ಹೀಗೆ ಸೇನೆ ಸೇರಲು ಬೇಕಾದ ದೈಹಿಕ ಸಧೃಡತೆಯನ್ನ ಯುವಕರಿಗೆ ಹೇಳಿಕೊಡುತ್ತಿದ್ದಾರೆ.
ವಾರಕ್ಕೊಮ್ಮೆ ಸುತ್ತಮುತ್ತಲಿನ ಬೆಟ್ಟಗಳಿಗೆ ಚಾರಣ ಸಹ ಹೋಗುತ್ತಾರೆ. ಪ್ರತಿದಿನ ಬೆಳಗ್ಗೆ ಎರಡು ಗಂಟೆ ತರಬೇತಿಯನ್ನು ನೀಡುತ್ತಾರೆ. ತರಬೇತಿ ಪಡೆದವರಲ್ಲಿ ಕೆಲವರು ಸೇನೆ ಸೇರಿದ್ದಾರೆ ಮತ್ತೆ ಕೆಲವರು ಪೊಲೀಸ್ ಆಗುವ ನಿರೀಕ್ಷೆಯಲ್ಲಿದ್ದಾರೆ.