ಚೆನ್ನೈ (ತಮಿಳುನಾಡು): ಭಾರತ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನರಾಗಿದ್ದಾರೆ. ತಮಿಳುನಾಡಿನ ಚೆನ್ನೈನ ತಮ್ಮ ಮನೆಯಲ್ಲಿ ವಾಣಿ ಜಯರಾಂ ಕೊನೆಯುಸಿರೆಳೆದಿದ್ದಾರೆ. ಇತ್ತೀಚಗಷ್ಟೇ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿತ್ತು.
78 ವರ್ಷದ ವಯಸ್ಸಿನವರಾಗಿದ್ದ ವಾಣಿ ಜಯರಾಂತ ಮಿಳುನಾಡಿನ ವೆಲ್ಲೂರಿನಲ್ಲಿ 1945ರ ನವೆಂಬರ್ 30ರಂದು ಜನಿಸಿದ್ದರು. ನಿನ್ನೆ ರಾತ್ರಿ ಚೆನ್ನೈನ ನುಂಗಂಬಾಕ್ಕಂನ ಹ್ಯಾಡೋಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಮಲಗಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಗೆಲಸದವರೊಬ್ಬರು ಆಗಮಿಸಿದ್ದಾಗ ಮನೆಯ ಒಳಗಡೆಯಿಂದ ಬೀಗ ಹಾಕಲಾಗಿತ್ತು. ತುಂಬಾ ಹೊತ್ತಾದರೂ ಬಾಗಿಲು ತೆರೆದಿಲ್ಲ.
ಹೀಗಾಗಿ ಮನೆಗೆಲಸದವರು ವಾಣಿ ಜಯರಾಂ ಅವರ ಸಂಬಂಧಿ ಉಮಾ ಎಂಬುವವರಿಗೆ ಮಾಹಿತಿ ನೀಡಿದ್ದಾರೆ. ಆಗ ಮನೆಗೆ ಆಗಮಿಸಿದ ಉಮಾ ತಮ್ಮ ಬಳಿಯಿದ್ದ ಮತ್ತೊಂದು ಕೀಲಿಯಿಂದ ಮನೆಯ ಬೀಗ ತೆಗೆದು ಒಳಗಾಗಿದ್ದಾರೆ. ಈ ವೇಳೆ, ವಾಣಿ ಜಯರಾಂ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಹಣೆಯ ಮೇಲೆ ಗಾಯಗಳು ಸಹ ಕಂಡು ಬಂದಿವೆ. ಆದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಾರ್ಥಿವ ಶರೀರವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಗಾಯನ: ಭಾರತೀಯ ಚಿತ್ರರಂಗದ ಹಿರಿಯ ಗಾಯಕರಾಗಿದ್ದ ವಾಣಿ ಜಯರಾಂ 19 ಭಾಷೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಾಡಿದ್ದಾರೆ. ಕನ್ನಡ, ಹಿಂದಿ ತೆಲುಗು, ತಮಿಳು, ಮಲಯಾಳಂ, ಮರಾಠಿ, ಒರಿಯಾ, ಗುಜರಾತಿ, ಬಂಗಾಳಿ, ಭೋಜ್‌ಪುರಿ, ತುಳು ಭಾಷೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ತಮ್ಮ ಕಂಠಸಿರಿಯಿಂದ ಹೊರ ಹೊಮ್ಮಿಸಿದ್ದಾರೆ.
ಪದ್ಮಾವತಿ ಮತ್ತು ದೊರೈಸ್ವಾಮಿ ಪುತ್ರಿಯಾದ ವಾಣಿ ಜಯರಾಂ ಬಾಲ್ಯದಿಂದಲೇ ಸಂಗೀತದಲ್ಲಿ ಅಭಿರುಚಿ ಹೊಂದಿದ್ದರು. ಐದನೇ ವಯಸ್ಸಿನಲ್ಲಿ ಕಡಲೂರಿನ ವಿದ್ವಾಂಸ ಶ್ರೀನಿವಾಸ ಅಯ್ಯಂಗಾರ್ ಎಂಬುವರ ಬಳಿ ಮೊದಲು ಸಂಗೀತಾಭ್ಯಾಸ ಶುರು ಮಾಡಿದ್ದರು. ಆ ನಂತರ ಟಿ.ಆರ್.ಬಾಲಸುಬ್ರಮಣ್ಯಂ ಮತ್ತು ತಿರುವನಂತಪುರ ಆರ್.ಎಸ್.ಮಣಿ ಅವರಂತಹ ಖ್ಯಾತ ಸಂಗೀತಗಾರರಿಂದ ಇನ್ನಷ್ಟು ಸಂಗೀತ ತರಬೇತಿ ಪಡೆದ್ದಿದ್ದರು. ತಮ್ಮ ಹತ್ತನೇ ವಯಸ್ಸಿನಲ್ಲೇ ವಾಣಿ ಜಯರಾಂ ಅವರಿಗೆ ಮೊದಲ ಬಾರಿಗೆ ಆಕಾಶವಾಣಿಯಲ್ಲಿ ಹಾಡುವ ಅವಕಾಶ ದೊರೆತಿತ್ತು.
ಮದ್ರಾಸ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಆಗಿದ್ದ ಅವರು ತಮ್ಮ ವ್ಯಾಸಂಗ ಪೂರ್ಣಗೊಳಿಸಿದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದ್ದರು. ಜಯರಾಮ್ ಅವರನ್ನು ವಾಣಿ ವಿವಾಹದ ಬಳಿಕ ಚೆನ್ನೈನಿಂದ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಇಲ್ಲಿ ಪತಿ ಜಯರಾಮ್ ಅವರ ಸಹಕಾರದೊಂದಿಗೆ ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದು ಅದನ್ನೂ ಕರಗತ ಮಾಡಿಕೊಂಡಿದ್ದರು. 1969ರಲ್ಲಿ ಮುಂಬೈನಲ್ಲಿ ತಮ್ಮ ಮೊದಲ ಸಂಗೀತ ಕಚೇರಿಯನ್ನು ವಾಣಿ ನೀಡಿದ್ದರು. ಅದು ವಾಣಿ ಜಯರಾಂ ಅವರ ಸಂಗೀತ ಬದುಕಿಗೆ ದೊಡ್ಡ ತಿರುವನ್ನು ನೀಡಿತ್ತು. ವಾಣಿ ಅವರ ಪತಿ ಜಯರಾಮ್ 2018ರಲ್ಲಿ ನಿಧನರಾಗಿದ್ದರು.
ಅಂತಿಮ ದರ್ಶನ ಪಡೆದ ರಾಜ್ಯಪಾಲರು: ಹಿರಿಯ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ತಮಿಳುನಾಡು ರಾಜ್ಯಪಾಲ ಆರ್ಎನ್ ರವಿ ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.
ಇದನ್ನು ಓದಿ: ಶಂಕರಾಭರಣಂ ಬಿಡುಗಡೆಯಾದ ದಿನದಂದೇ ನಿಧನರಾದ ದಿಗ್ಗಜ ನಿರ್ದೇಶಕ ಕೆ ವಿಶ್ವನಾಥ್