ಕಬ್ಜ ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದ ಧರಿಸಿದ ಕಾಸ್ಟ್ಯೂಮ್ಗಳ ಹಿಂದೆ ಒಂದೊಂದು ಕಹಾನಿ ಇದೆ. ಅದರಲ್ಲೂ ನಾಯಕಿ ಶ್ರೀಯಾ ಶರಣ್ ಅವರ ಪಾತ್ರದ ವೈಭವ ಕಣ್ಣು ಕುಕ್ಕುವಂತಿದೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ ಶ್ರೀಯಾ ಅವರೇ ಬೇರೆ, ಕಬ್ಜ ಚಿತ್ರದಲ್ಲಿ ಕಾಣಿಸುವ ಶ್ರೀಯಾ ಬೇರೆ ಎಂಬಷ್ಟರಮಟ್ಟಿಗೆ ಅವರ ಗೆಟಪ್ ಬದಲಾಗಿದೆ. ಚಿತ್ರದಲ್ಲಿ ಅವರು ಧರಿಸಿದ ಬಟ್ಟೆ ಹಾಗೂ ಆಭರಣ ಚರ್ಚೆಯಾಗುತ್ತಿದೆ.
ಸಿನಿಮಾದಿಂದ ಮೊದಲ ಬಾರಿ ಶ್ರೀಯಾ ಶರಣ್ ಅವರ ಫಸ್ಟ್ ಲುಕ್ ಬಿಡುಗಡೆ ಆದಾಗ ಎಲ್ಲರ ಗಮನ ಸೆಳೆದದ್ದು ಅವರ ಕಾಸ್ಟ್ಯೂಮ್. ಸಿಂಹಾಸನದ ಮೇಲೆ ಮಹಾರಾಣಿಯಂತೆ ಕುಳಿತ ಅವರನ್ನು ನೋಡಲು ಎರಡು ಕಣ್ಣು ಸಾಲದಾಯಿತು. ಇದು ರೆಟ್ರೋ ಕಾಲದ ರಾಯಲ್ ಫ್ಯಾಮಿಲಿಯ ಹೆಣ್ಣು ಮಗಳ ಪಾತ್ರ ಅಂತಾ ಜನರಿಗೆ ಗೊತ್ತಾಯ್ತು. ಅಂತಹ ರಾಯಲ್ ಲುಕ್ ಕಲ್ಪನೆ ಆರ್.ಚಂದ್ರು ಅವರದ್ದಂತೆ. ಆ ಕಲ್ಪನೆಗೆ ಜೀವ ಬರುವಂತೆ ಶ್ರಮಿಸಿರುವುದು ಕಾಸ್ಟ್ಯೂಮ್ ಡಿಸೈನರ್ ಸಿತಾರಾ.
ಕಬ್ಜದ ಎಲ್ಲ ಪಾತ್ರಗಳು ಕೂಡ ಹಾಗೆಯೇ ಕಾಣಬೇಕು. ಶ್ರೀಯಾ ಅವರ ಲುಕ್ಗಾಗಿ ಕಾಸ್ಟ್ಯೂಮ್ ಡಿಸೈನರ್ ಸಿತಾರಾ ಸಾಕಷ್ಟು ರಿಸರ್ಚ್ ನಡೆಸಿದ್ದರು. ತುಂಬಾ ಕಾಳಜಿ ವಹಿಸಿ ಹಲವು ದಿನಗಳಷ್ಟು ಸಮಯ ತೆಗೆದುಕೊಂಡು ಪಾತ್ರಕ್ಕೆ ಬೇಕಾದ ಎಲ್ಲ ಕಾಸ್ಟ್ಯೂಮ್ ಸಿದ್ಧಪಡಿಸಿದ್ದರು. ಕಾಂಚೀವರಂ, ಮೈಸೂರು ಸಿಲ್ಕ್, ಬನಾರಸ್ ಸೀರೆಗಳನ್ನು ತೆಗೆದುಕೊಂಡು ಅವುಗಳಿಗೆ ಹೊಸ ರೂಪ ನೀಡಿದ್ದರು. ಇಡೀ ದೇಶದಲ್ಲಿ ಸಿಗುವ ದಿ ಬೆಸ್ಟ್ ಕ್ವಾಲಿಟಿಯ ಬಟ್ಟೆಗಳಿಂದ ಶ್ರೀಯಾ ಅವರ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ. ಪ್ರತಿ ಲೆಹಂಗಾಗೆ 7-8 ದಿನಗಳ ಕಾಲ ಸಮಯ ತೆಗೆದುಕೊಂಡು ಕಸೂತಿ ಹಾಕಲಾಗಿದೆ.
ಶ್ರೀಯಾ ಶರಣ್ ಧರಿಸಿದ ಆಭರಣಗಳಂತೂ ಸಿಕ್ಕಾಪಟ್ಟೆ ದುಬಾರಿ ಮತ್ತು ಅಪರೂಪದ್ದು. ಪ್ಯೂರ್ ಗೋಲ್ಡ್ ಮತ್ತು ಡೈಮಂಡ್ ಆಭರಣಗಳನ್ನು ಧರಿಸಿ ಶ್ರೀಯಾ ಆ್ಯಕ್ಟ್ ಮಾಡಿದ್ದಾರೆ. ಎರಡು ಪ್ರತಿಷ್ಠಿತ ಜ್ಯೂವೆಲ್ಲರಿ ಬ್ರ್ಯಾಂಡ್ಗಳ ಜತೆ ಕೈ ಜೋಡಿಸಿ ಅತ್ಯಾಕರ್ಷಕವಾದ ಆಭರಣಗಳನ್ನು ಸೆಲೆಕ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಮಾಮಿ ನಮಾಮಿ ಹಾಡು ರಿಲೀಸ್ ಆದಾಗ ದೇವಲೋಕದ ಅಪ್ಸರೆ ಧರೆಗಿಳಿದು ಬಂದು ಕುಣಿಯುತ್ತಿರುವಂತೆ ಅನಿಸಿತ್ತು. ಶ್ರೀಯಾ ಆ ರೀತಿ ಕಾಣಲು ಕಾರಣ ಆಗಿದ್ದೇ ಕಾಸ್ಟ್ಯೂಮ್ ಡಿಸೈನ್. ಹಾಡು ನೋಡಿದ ಹೆಣ್ಮಕ್ಕಳೆಲ್ಲ ಲೆಹಂಗಾ ಮತ್ತು ಆಭರಣ ಕಂಡು ವಾವ್! ಎಂದಿದ್ದರು. ಆ ವಿಚಾರದಲ್ಲಿ ನಿರ್ದೇಶಕ ಆರ್.ಚಂದ್ರು ಅವರ ವಿಷನ್ ಚೆನ್ನಾಗಿ ಕೆಲಸ ಮಾಡಿದೆ.
ಇದನ್ನೂ ಓದಿ: 'ನಮಾಮಿ ನಮಾಮಿ'...ನಟರಾಜನಿಗೆ ಭಕ್ತಿ ಅರ್ಪಿಸಿದ ಶ್ರೀಯಾ ಶರಣ್