ಮಂಗಳೂರು: ಕನ್ನಡದ ಹಿರಿಯ ನಟಿ ಭವ್ಯ ಅವರು ಶುಕ್ರವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡು, ಪ್ರೇರಣಾದಾಯಕ ಮಾತುಗಳಿಂದ ಅವರನ್ನು ಹುರಿದುಂಬಿಸಿದರು. ನಗರದಲ್ಲಿ 'ಕರಿಹೈದ ಕರಿಯಜ್ಜ (ಕೊರಗಜ್ಜ)' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅವರು, ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ್ದರು. ಯಾವಾಗಲೂ ತಮ್ಮ ಖಾಕಿ ಯೂನಿಫಾರ್ಮ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇಂದು ರಂಗಿನ ವಸ್ತ್ರದಲ್ಲಿ ಕಾಣಿಸಿಕೊಂಡು ಭವ್ಯ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ವ್ಯಕ್ತಿತ್ವದೊಂದಿಗೆ ಶಿಸ್ತು, ವಿನಯ ಅಗತ್ಯ: ಈ ವೇಳೆ ಭವ್ಯ ಅವರೊಂದಿಗೆ ಮಂಗಳೂರಿನ ಮಹಿಳಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ನಟಿ ಭವ್ಯ ಅವರು ತಾವು ಅಭಿನಯಿಸಿರುವ ಹೃದಯಗೀತೆ ಸಿನಿಮಾದ 'ಯುಗಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ' ಹಾಡನ್ನು ಹಾಡಿ ಗಮನ ಸೆಳೆದರು. ಬಳಿಕ ಮಾತನಾಡಿದ ಅವರು, 'ನಮ್ಮ ಸಾಧನೆಗಳಿಗೆ ನಮ್ಮ ವ್ಯಕ್ತಿತ್ವವೇ ಕಾರಣ. ನಾನು ಚಿತ್ರರಂಗದಲ್ಲಿ 14 ವರ್ಷ ಇರುವಾಗಲೇ ಪ್ರವೇಶ ಮಾಡಿದೆ. ನಾನು ಚಿತ್ರರಂಗದಲ್ಲಿ ಈಗ 40 ವರ್ಷವನ್ನು ಕಳೆದಿದ್ದೇನೆ. ನನ್ನ ವ್ಯಕ್ತಿತ್ವವನ್ನು ರೂಪಿಸಲು ನನ್ನ ತಾಯಿ ಕಾರಣ. ವ್ಯಕ್ತಿತ್ವದೊಂದಿಗೆ ಶಿಸ್ತು, ವಿನಯ ಅಗತ್ಯ. ಅದನ್ನು ಈ ಸಿನಿಮಾರಂಗ ನನಗೆ ಕಲಿಸಿಕೊಟ್ಟಿದೆ' ಎಂದರು.
ಹಿರಿಯರ ಜೀವನಾನುಭವವನ್ನು ರೂಢಿಸಿಕೊಳ್ಳಬೇಕು: 'ನನ್ನ ಮೊದಲ ಸಿನಿಮಾ ನಿರ್ದೇಶಿಸಿದ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರು ನನಗೆ ಬಹಳಷ್ಟು ಜೀವನ ಪಾಠವನ್ನು ಕಲಿಸಿದ್ದಾರೆ. ಅದರಿಂದ ನಾನು ಇಷ್ಟೊಂದು ಸಾಧನೆಯನ್ನು ಮಾಡಲು ಸಾಧ್ಯವಾಯಿತು. ಇಂದು ಮೊಬೈಲ್ನಲ್ಲಿಯೇ ಕಾಲ ಕಳೆಯುವುದೇ ಹೆಚ್ಚಾಗಿದೆ. ನಮ್ಮ ಸಂಸ್ಕಾರ, ಸಾಧನೆಗಳಿಗೆ ಹಿರಿಯರ ಜೀವನಾನುಭವವನ್ನು ರೂಢಿಸಿಕೊಳ್ಳಬೇಕಾಗುತ್ತದೆ' ಎಂದು ಅವರು ಹೇಳಿದರು.
ಕೊರಗಜ್ಜ ಚಿತ್ರದಲ್ಲಿ ಬಾಲಿವುಡ್ ನಟ: ಬಾಲಿವುಡ್ ತಾರೆಯರು ಕನ್ನಡ ಚಿತ್ರರಂಗಕ್ಕೆ ಬರುವ ವಾಡಿಕೆ 60-70ರ ದಶಕದಿಂದಲೂ ಇದೆ. ಸುಧೀರ್ ಅತ್ತಾವರ್ ನಿರ್ದೇಶನದ ‘ಕರಿಹೈದ ಕರಿಯಜ್ಜ’ ಸಿನಿಮಾದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಯುರೋಪಿನಾದ್ಯಂತ ಪ್ರಸಿದ್ಧಿ ಪಡೆದ ಸಂದೀಕನ್ ಟಿವಿ ಸೀರಿಸ್ನಲ್ಲಿ ನಟಿಸಿರುವ ಕಬೀರ್ ಬೇಡಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಕೊರಗಜ್ಜನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದ ಮಹನೀಯರೊಂದಿಗೆ ಚರ್ಚೆ ಮಾಡಿ 12ನೇ ಶತಮಾನದಲ್ಲಿದ್ದ ಕೊರಗಜ್ಜನ ಬಗ್ಗೆ ಯಾರಿಗೂ ಗೊತ್ತಿರದ ನಿಜ ಬದುಕಿನ ವಿಷಯವನ್ನು ತಿಳಿಸುವ ಪ್ರಯತ್ನ ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ಹೇಳಿದ್ದಾರೆ.
ಕೊರಗಜ್ಜ-ಗುಳಿಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಚಿತ್ರ ತಂಡ ಭೇಟಿ: ಕೊರಗಜ್ಜನ ಕುರಿತಾದ ಬಹುಭಾಷಾ ಚಿತ್ರ 'ಕರಿಹೈದ ಕರಿಯಜ್ಜ' ಯಶಸ್ಸಿಗೆ ಕಲ್ಲಾಪು ಬುರ್ದುಗೋಳಿಯ ಕೊರಗಜ್ಜ-ಗುಳಿಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಚಿತ್ರ ತಂಡವು ಭೇಟಿ ನೀಡಿ ಗುಳಿಗನಿಗೆ ಹರಕೆಯ ಹುಂಜವನ್ನು ಸಮರ್ಪಿಸಿದ್ದಾರೆ. ನಿರ್ದೇಶಕ ಸುಧೀರ್ ರಾಜ್ ಉರ್ವ ಅವರ ಸಲಹೆಯಂತೆ ಬುರ್ದುಗೋಳಿ ಕ್ಷೇತ್ರದ ಗುಳಿಗಜ್ಜನಿಗೆ ಹುಂಜ ಮತ್ತು ಮಂಗಳೂರಿನ ನಂದಿಗುಡ್ಡೆಯ ಕೊರಗಜ್ಜನ ಕ್ಷೇತ್ರದಲ್ಲಿ ಕೋಲ ಸೇವೆ ನೀಡುತ್ತೇನೆಂದು 'ಕರಿ ಹೈದ ಕರಿಯಜ್ಜ' ಚಿತ್ರದ ಯಶಸ್ಸಿಗಾಗಿ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಅವರು ಹರಕೆ ಹೊತ್ತಿದ್ದರಂತೆ. ಅದರಂತೆ ಬುರ್ದುಗೋಳಿ ಕ್ಷೇತ್ರಕ್ಕೆ ಹುಂಜವನ್ನು ಹರಕೆ ನೀಡಿದ್ದು ಗುಳಿಗ-ಕೊರಗಜ್ಜನ ಉದ್ಭವ ಶಿಲೆ ಸಮ್ಮುಖದಲ್ಲಿ ಚಿತ್ರತಂಡದವರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ತುಳುನಾಡ ದೈವ ಕೊರಗಜ್ಜ ಚಿತ್ರದಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ನಟನೆ