ಕನ್ನಡ ಚಿತ್ರರಂಗವಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ 'ವಿಕ್ರಾಂತ್ ರೋಣ'. ಕಿಚ್ಚ ಸುದೀಪ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಚಿತ್ರ. ಸದ್ಯ 'ರಾ ರಾ ರಕ್ಕಮ್ಮ ಹಾಡು' ಹಾಗೂ ಟ್ರೈಲರ್ನಿಂದಲೇ ಸಖತ್ ಸದ್ದು ಮಾಡುತ್ತಿರುವ ಈ ಚಿತ್ರ ಜು.28ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಹಿನ್ನೆಲೆ ಕಿಚ್ಚ ಸುದೀಪ್, ಕರ್ನಾಟಕ, ಚೆನ್ನೈ, ಆಂಧ್ರ ಪ್ರದೇಶ ಹಾಗೂ ಕೇರಳದಲ್ಲಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಕಿಚ್ಚ ವಿಕ್ರಾಂತ್ ರೋಣ, ಸಿನಿಮಾದ ಪ್ರಚಾರಕ್ಕೆ ವೇದಿಕೆ ರೆಡಿಯಾಗಿದೆ. 13 ವರ್ಷಗಳ ಬಳಿಕ ಕಿಚ್ಚ ಸುದೀಪ್ ದೆಹಲಿಯಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಈ ಹಿಂದೆ ತೆಲುಗಿನ 'ಈಗ ಸಿನಿಮಾ' ಪ್ರಮೋಷನ್ ಮಾಡಿದ್ದರು. ಈಗ ವಿಕ್ರಾಂತ್ ರೋಣ ಪ್ರಚಾರಕ್ಕಾಗಿ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ.
ಈ ಮಧ್ಯೆ ಕಿಚ್ಚ ಸುದೀಪ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿದ್ದಾರೆ. 20 ನಿಮಿಷಗಳ ಕಾಲ ಸಚಿವ ಜೋಶಿಯವರೊಂದಿಗೆ ಸಿನಿಮಾ ಹಾಗೂ ರಾಜಕೀಯ ಬೆಳವಣಿಗೆಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ದೆಹಲಿಯಲ್ಲಿ ವಿಕ್ರಾಂತ್ ರೋಣ ಚಿತ್ರತಂಡ ಅದ್ದೂರಿ ಪ್ರಚಾರ ಸಿದ್ದತೆ ಮಾಡಿಕೊಂಡಿದೆ.
ರಂಗಿತರಂಗ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಹೀಗೆ ದೊಡ್ಡ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆಹಾಕಿದ್ದಾರೆ. ನಿರ್ಮಾಪಕ ಜಾಕ್ ಮಂಜು ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.
ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲದೇ 3ಡಿ ವರ್ಷನ್ನಲ್ಲಿ ಚಿತ್ರ ಮೂಡಿ ಬರಲಿದೆ.
ಇದನ್ನೂ ಓದಿ: 'ವಿಕ್ರಾಂತ್ ರೋಣ' ಟ್ರೈಲರ್ ಹಂಚಿಕೊಂಡು ಸಿನಿಮಾ ವೀಕ್ಷಿಸುವಂತೆ ಅಮಿತಾಬ್ ಬಚ್ಚನ್ ಮನವಿ