ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಜೀ ಕನ್ನಡ ವಾಹಿನಿ ಸದಾ ಮುಂದಿರುತ್ತದೆ. ವಾರದ ಐದು ದಿನ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಕನ್ನಡಿಗರನ್ನು ರಂಜಿಸಿದರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳು ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಂತಹ ಕಾರ್ಯಕ್ರಮಗಳಲ್ಲಿ ಸೂಪರ್ ಕ್ವೀನ್ ಎಲ್ಲರಿಗೂ ಇಷ್ಟವಾಗಿತ್ತು. ಸ್ತ್ರೀ ಪ್ರಧಾನವಾಗಿರಿಸಿಕೊಂಡಿದ್ದ ಈ ಶೋ ಕರ್ನಾಟಕದ ಜನತೆಯನ್ನು ವಿಶೇಷವಾಗಿ ಆಕರ್ಷಿಸಿತು. ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದ ತಾರೆಯರನ್ನು ಕರೆಸಿ ಅವರ ಕರಾಳ ದಿನಗಳನ್ನು ತೆರೆದಿಟ್ಟಿತು. ಹೀಗಾಗಿಯೇ ಈ ಕಾರ್ಯಕ್ರಮವು ಹಲವರಿಗೆ ಸ್ಫೂರ್ತಿ ನೀಡಿದೆ.
ಹೆಣ್ಣು ಮಕ್ಳೇ ಸ್ಟ್ರಾಂಗ್ ಗುರು ಅಂತಾ ಮನರಂಜಿಸುತ್ತಿದ್ದ ಈ ಶೋನ ತೀರ್ಪಿಗಾಗಿ ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಇದ್ದರು. ಕುರಿ ಪ್ರತಾಪ್ ಮತ್ತು ಶ್ವೇತಾ ಚಂಗಪ್ಪ ಕಾರ್ಯಕ್ರಮ ನಿರೂಪಿಸುತ್ತಿದ್ದರು. ಗೀತಾ, ಅಪೂರ್ವ, ಚಂದ್ರಕಲಾ, ರೆಮೋ, ರಜನಿ, ನೀತು, ಐಶ್ವರ್ಯ, ಗೇಬ್ರಿಯೆಲಾ ಸೇರಿದಂತೆ 10 ಮಂದಿ ಸ್ಪರ್ಧಿಗಳು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಈ ಕಲಾವಿದರ ಇಡೀ ಜೀವನದ ಕಥೆಯನ್ನು ಈ ಶೋ ಹೇಳಿತ್ತು. ಪ್ರತಿ ವಾರವೂ ಎಲ್ಲ ಸ್ಪರ್ಧಿಗಳು ಒಂದಲ್ಲಾ ಒಂದು ವಿಷಯದಲ್ಲಿ ಸೂಪರ್ ಕ್ವೀನ್ಗಳಾಗಿಯೇ ಕಾಣಿಸಿಕೊಳ್ಳುತ್ತಿದ್ದರು.
ಇದನ್ನೂ ಓದಿ: 'ಡಾಲಿ ನಟ ರಾಕ್ಷಸ, ನವೀನ್ ಹೊಸ ರಾಕ್ಷಸ': 'ಗುರುದೇವ್ ಹೊಯ್ಸಳ'ನಿಗೆ ಸಿನಿ ತಾರೆಗಳ ಮೆಚ್ಚುಗೆ
ಸಂತೋಷ, ನೋವು, ನಲಿವು ಎಲ್ಲವೂ ಈ ಶೋನಲ್ಲಿತ್ತು. ಇದಲ್ಲದೇ ಕುರಿ ಪ್ರತಾಪ್ ಕಾಮಿಡಿಯಂತೂ ಅಭಿಮಾನಿಗಳ ಹೊಟ್ಟೆ ಹುಣ್ಣಾಗಿಸುವಂತೆ ಮಾಡಿತ್ತು. ಗೇಬ್ರಿಯೆಲಾ ಅವರ ರ‍್ಯಾಪ್ ಸಾಂಗ್ಸ್, ರಶ್ಮಿ ಪ್ರಭಾಕರ್ ನಗ್ಲೇಬಾರದು ಅಂತ ಹೇಳಿ ಕೇಳೋ ಪ್ರಶ್ನೆಗಳು, ರಜನಿ ಮಾಡೋ ಅನುಕರಣೆ, ರೆಮೋ ಸಾಂಗ್ಸ್ ಜೊತೆಗೆ ಎಲ್ಲ ಸ್ಪರ್ಧಿಗಳ ಮನದ ಮಾತುಗಳು, ಟಾಸ್ಕ್ಗಳು ಹೀಗೆ ವಾರದ ಎರಡು ದಿನ ವೀಕ್ಷಕರಿಗೆ ಮನರಂಜನೆ ಚೌತಣವನ್ನೇ ಜೀ ಕನ್ನಡ ಉಣ ಬಡಿಸಿತ್ತು.
ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್!
ಇದೀಗ ಕೆಲವು ತಿಂಗಳುಗಳಿಂದ ಕನ್ನಡಿಗರ ಮನೆ ಮಾತಾಗಿದ್ದ ರಿಯಾಲಿಟಿ ಶೋ 'ಸೂಪರ್ ಕ್ವೀನ್' ಮುಕ್ತಾಯಗೊಂಡಿದೆ. 10 ಸ್ಪರ್ಧಿಗಳಲ್ಲಿ ಸೂಪರ್ ಕ್ವೀನ್ ಪಟ್ಟವನ್ನು ನಟಿ ರಶ್ಮಿ ಪ್ರಭಾಕರ್ ಗಿಟ್ಟಿಸಿಕೊಂಡಿದ್ದಾರೆ. ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಶನಿವಾರ ಮತ್ತು ಭಾನುವಾರ ಪ್ರಸಾರವಾಗಿದ್ದು, ಲಕ್ಷೀ ಬಾರಮ್ಮ ಧಾರಾವಾಹಿಯ ಚಿನ್ನು ಪಾತ್ರಧಾರಿ ರಶ್ಮಿ ವಿನ್ನರ್ ಪಟ್ಟವನ್ನು ಅಲಂಕರಿಸಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಮಜಾ ಟಾಕೀಸ್ ಖ್ಯಾತಿಯ ರೆಮೋ ಮತ್ತು ಎರಡನೇ ರನ್ನರ್ ಅಪ್ ಆಗಿ ಕಿರುತೆರೆ ನಟಿ ರಜನಿ ಹೊರಹೊಮ್ಮಿದ್ದಾರೆ. ಸೂಪರ್ ಕ್ವೀನ್ ಆದ ರಶ್ಮಿ ಅವರಿಗೆ ಚಿನ್ನದ ಕಿರೀಟ ಸಿಕ್ಕಿದೆ.
ಇದನ್ನೂ ಓದಿ: ಮೂಲ ಮೈಸೂರು, 100ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ಸಂಯೋಜನೆ: ಪ್ರಭು ದೇವಗಿಂದು 50ನೇ ಜನ್ಮದಿನ ಸಂಭ್ರಮ