ಬಾಲಿವುಡ್ ಮಾಜಿ ದಂಪತಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಪುತ್ರ ಅರ್ಹಾನ್ ಖಾನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ನವೆಂಬರ್ 9ರಂದು ಸ್ಟಾರ್ ಕಿಡ್ 21ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಮಲೈಕಾ ಅರೋರಾ, ಮಗನಿಗೆ ಜನ್ಮದಿನದ ಪ್ರೀತಿಯ ಸಂದೇಶದೊಂದಿಗೆ ಅವರ ಬಾಲ್ಯ ಮತ್ತು ಇತ್ತೀಚಿನ ಫೋಟೋಗಳನ್ನು ಒಳಗೊಂಡಿರುವ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮಗನಿಗೆ ಜನ್ಮದಿನದ ಶುಭಾಶಯ ಕೋರಲು ನಟಿ ಮಲೈಕಾ ಅರೋರಾ ಇನ್ಸ್ಟಾಗ್ರಾಮ್ ಅನ್ನು ವೇದಿಕೆಯನ್ನಾಗಿ ಬಳಸಿಕೊಂಡಿದ್ದಾರೆ. ಅರ್ಹಾನ್ ಖಾನ್ ಅವರ ಬಾಲ್ಯ, ಇತ್ತೀಚಿನ ಫೋಟೋಗಳನ್ನೇ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ತಾಯಿ ಮತ್ತು ಮಗ ಜೊತೆಯಾಗಿ ಇರುವ ಅನೇಕ ದೃಶ್ಯಗಳನ್ನು ಕಾಣಬಹುದು. ವಿಡಿಯೋದ ಜೊತೆಗೆ ಹುಟ್ಟುಹಬ್ಬಕ್ಕಾಗಿ ಪ್ರೀತಿಯ ಸಂದೇಶವನ್ನು ಬರೆದಿದ್ದಾರೆ.
"ನನ್ನ ಹುಡುಗನಿಗೆ ಇಂದು 21 ವರ್ಷ. ನಿನಗಾಗಿ ನನ್ನ ಹಾರೈಕೆ ಸರಳವಾಗಿದೆ. ಊಹಿಸಬಹುದಾದ ಅತ್ಯುತ್ತಮ ಜೀವನ ನಿನ್ನದಾಗಲಿ. ಜೀವನವನ್ನು ಪೂರ್ತಿಯಾಗಿ ಅನುಭವಿಸು. ನಗು, ನಗು, ನಗು ಅಳು ಬಂದಲ್ಲಿ ಅಳು.. ಪ್ರಾಮಾಣಿಕನಾಗಿರು. ನೀನು ಆರಾಧಿಸುವ ಜನರಿಗಾಗಿ ಸಮಯವನ್ನು ಮೀಸಲಿಡು. ಚೆನ್ನಾಗಿ ನಿದ್ರೆ ಮಾಡಿ ಉತ್ತಮ ಕನಸುಗಳನ್ನು ಕಾಣು. ನಿನ್ನ ಮುಖದಲ್ಲಿ ಯಾವಾಗಲೂ ನಗು ಇರಲಿ. ನಮ್ಮನ್ನು ನಗಿಸುವ ನಿನ್ನ ಹಾಸ್ಯವನ್ನು ಎಂದಿಗೂ ನಿಲ್ಲಿಸಬೇಡ. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ನಿನಗೆ ತಿಳಿದಿದೆ. ಹ್ಯಾಪಿ ಬರ್ತ್ಡೇ ಮೈ ಸ್ವೀಟ್ ಬಾಯ್. ಅಮ್ಮ ನಿನ್ನನ್ನು ಹೆಚ್ಚು ಪ್ರೀತಿಸುತ್ತಾಳೆ. ಜೊತೆಗೆ ಅಮ್ಮ ನಿನ್ನ ಬಗ್ಗೆ ಹೆಮ್ಮೆ ಪಡುತ್ತಾಳೆ" ಎಂದು ಬರೆದುಕೊಂಡು ಶುಭ ಕೋರಿದ್ದಾರೆ.
ಇದನ್ನೂ ಓದಿ: ಶಾರುಖ್ ಪುತ್ರಿಯ 'ದಿ ಆರ್ಚೀಸ್' ಟ್ರೇಲರ್ ರಿಲೀಸ್: ಬಾಲಿವುಡ್ ಸ್ಟಾರ್ಗಳ ಮಕ್ಕಳು, ಮೊಮ್ಮಕ್ಕಳ ಸಂಗಮ
ಈ ಹಿಂದೆ ವೆಬ್ಲಾಯ್ಡ್ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅರ್ಬಾಜ್ ಖಾನ್, ತನ್ನ ಮಗ ಯುಎಸ್ನ ಲಾಂಗ್ ಐಲ್ಯಾಂಡ್ ಫಿಲ್ಮ್ ಸ್ಕೂಲ್ನಲ್ಲಿ ಫಿಲ್ಮ್ ಮೇಕಿಂಗ್ ಅಧ್ಯಯನ ಮಾಡುತ್ತಿದ್ದಾನೆ ಎಂದು ತಿಳಿಸಿದ್ದರು. ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಅರ್ಹಾನ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದರು. ಸದ್ಯ ಅರ್ಹಾನ್ ಖಾನ್ ಯುಎಸ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 1998 ರಲ್ಲಿ ಮದುವೆಯಾದರು. ಅವರಿಬ್ಬರ ಪ್ರತ್ಯೇಕತೆಯ ವದಂತಿಗಳು 2016ರ ಮಾರ್ಚ್ ತಿಂಗಳಿನಿಂದ ಪ್ರಾರಂಭವಾಯಿತು. 2017 ರಲ್ಲಿ ಇವರಿಬ್ಬರು ಅಧಿಕೃತವಾಗಿ ವಿಚ್ಛೇದನ ಪಡೆದರು. ಅದಾಗ್ಯೂ ತಮ್ಮ ಮಗ ಅರ್ಹಾನ್ ಖಾನ್ಗೆ ಪೋಷಕರಾಗಿ ಮುಂದುವರೆಯುತ್ತಿದ್ದಾರೆ. ಸದ್ಯ ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದಾರೆ.
ಇದನ್ನೂ ಓದಿ: ಮುಂದಿನ ಸಂಕ್ರಾಂತಿಗೆ ಕ್ಯಾಪ್ಟನ್ ಮಿಲ್ಲರ್ ತೆರೆಗೆ: ಧನುಷ್, ಶಿವಣ್ಣನ ಸಿನಿಮಾ ಮೇಲೆ ಪ್ರೇಕ್ಷಕರ ಕುತೂಹಲ