ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಅವರು ಪುತ್ರಿ ವಮಿಕಾ ಜೊತೆಗೆ ಪ್ರಸಿದ್ಧ ಮಥುರಾದ ವೃಂದಾವನಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಇದೇ ವಿಷಯವಾಗಿ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಸದಾ ಆಶೀರ್ವಾದ ನೀಡುತ್ತಿರುವ ದೇವರಿಗೊಂದು ಕೃತಜ್ಞತೆ ಅರ್ಪಿಸಿದ್ದಾರೆ. ತಮ್ಮ ಮುದ್ದಾದ ಮಗಳು ವಾಮಿಕಾ ಜೊತೆ ವಿರುಷ್ಕಾ ದಂಪತಿ ಕಡಲ ತೀರದಲ್ಲಿ ಹೆಜ್ಜೆ ಹಾಕುತ್ತಿರುವ ಫೋಟೋ ಇದಾಗಿದೆ.
'ದೇವರೆ, ನಾನು ಬಯಸಿದ್ದಕ್ಕಿಂತ ಹೆಚ್ಚಿನದನ್ನೇ ನೀವು ಆಶೀರ್ವದಿಸಿದ್ದೀರಿ. ನಿಮಗೆ ನಾನು ಕೃತಜ್ಞತೆ ಹೇಳಲು ಬಯಸುತ್ತೇನೆ.' ಎಂದು ಪಂಜಾಬ್ ಭಾಷೆಯಲ್ಲಿ ಶೀರ್ಷಿಕೆ ಬರೆದುಕೊಂಡಿದ್ದಾರೆ. ವಿರಾಟ್ ಪೋಸ್ಟ್ಗೆ ನಟ ಅಪಾರ್‌ಶಕ್ತಿ ಖುರಾನಾ ಪ್ರತಿಕ್ರಿಯಿಸಿದ್ದು, 'ನಿಮಗೆ ದೇವರು ಸದಾ ಆಶೀರ್ವದಿಸುತ್ತಾರೆ' ಎಂದು ಕಮೆಂಟ್ ಮಾಡಿದ್ದಾರೆ. ಕೊಹ್ಲಿ ಸಹೋದರ ವಿಕಾಸ್ ಸೇರಿದಂತೆ, ವಿರುಷ್ಕಾ ಅಭಿಮಾನಿಗಳು ಕಮೆಂಟ್ ಮಾಡಿದ್ದು, 'ದೇವರು ನಿಮ್ಮ ಕುಟುಂಬವನ್ನು ಚೆನ್ನಾಗಿಟ್ಟಿರಲಿ' ಎಂದು ಹಾರೈಸಿದ್ದಾರೆ.
ವೃಂದಾವನ ಆಶ್ರಮಕ್ಕೆ ಭೇಟಿ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಪುತ್ರಿ ವಮಿಕಾ ಜೊತೆಗೆ ಜನವರಿ 3ರಂದು ಮಥುರಾದ ವೃಂದಾವನಕ್ಕೆ ಭೇಟಿ ನೀಡಿದ್ದರು. ನೀಮ್ ಕರೋಲಿ ದೇವಸ್ಥಾನಕ್ಕೆ ಗೌಪ್ಯವಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಭೇಟಿಯ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕಬ್ಜ: ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಕೂಡ ಲಿಸ್ಟ್
ಜಾಹೀರಾತಿನ ಚಿತ್ರೀಕರಣವೊಂದರಲ್ಲಿ ಭೇಟಿಯಾಗಿ ಕೆಲವು ವರ್ಷಗಳ ಕಾಲ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ 2017 ಡಿಸೆಂಬರ್ 11ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ನವದೆಹಲಿ ಹಾಗೂ ಮುಂಬೈನಲ್ಲಿ ರಿಸೆಪ್ಷನ್ ಪಾರ್ಟಿ ಆಯೋಜಿಸಿದ್ದರು. ಪ್ರಧಾನಿ ಮೋದಿ, ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. 2021ರ ಜನವರಿ 11 ರಂದು ತಾರಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, 'ವಮಿಕಾ' ಎಂದು ನಾಮಕರಣ ಮಾಡಿದ್ದರು.
5ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಜೋಡಿ: ವಿವಾಹವಾಗಿ 5 ವರ್ಷ ಪೂರೈಸಿರುವ ವಿರುಷ್ಕಾ ಒಂದು ತಿಂಗಳ ಹಿಂದೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. 'ನಮ್ಮನ್ನು ನಾವು ಆಚರಿಸಿಕೊಳ್ಳಲು ಈ ಸುಂದರವಾದ ಚಿತ್ರಗಳನ್ನು ಪೋಸ್ಟ್ ಮಾಡಲು ಇವತ್ತಿಗಿಂತ ಉತ್ತಮವಾದ ದಿನ ಯಾವುದು' ಎಂದು ನಟಿ ಅನುಷ್ಕಾ ಶರ್ಮಾ ಕ್ಯಾಪ್ಶನ್ ಬರೆದುಕೊಂಡು ಕೆಲ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ವಿರಾಟ್ ಕೊಹ್ಲಿ ಅವರ ಫನ್ನಿ ಫೋಟೋಗಳಿದ್ದವು. 'ಶಾಶ್ವತತೆಯ ಪ್ರಯಾಣದಲ್ಲಿ 5 ವರ್ಷಗಳು.. ನಿಮ್ಮನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ' ಎಂದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡು ಪತ್ನಿಗೆ ಶುಭ ಕೋರಿದ್ದರು.
ಇದನ್ನೂ ಓದಿ: ಶಾಕುಂತಲಂ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.. ವೇದಿಕೆ ಮೇಲೆಯೇ ಕಣ್ಣೀರಿಟ್ಟ ನಟಿ ಸಮಂತ