ಕನ್ನಡ ಚಿತ್ರರಂಗದ ಮಾಸ್ ಲುಕ್ ಇರುವ ನಟರುಗಳಲ್ಲಿ ನಟ ವಿನೋದ್ ಪ್ರಭಾಕರ್ ಕೂಡ ಒಬ್ಬರು. ಸದ್ಯ ವಿನೋದ್ ಪ್ರಭಾಕರ್ ಅಭಿನಯದ ಜೊತೆಗೆ ಚಿತ್ರ ನಿರ್ಮಾಣಕ್ಕೂ ಕೈ ಹಾಕಿರೋದು ನಮಗೆಲ್ಲ ತಿಳಿದಿರುವ ವಿಚಾರ. ತಮ್ಮ ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಮೂಲಕ ಮೊದಲ ಪ್ರಯತ್ನವಾಗಿ ತಮ್ಮದೇ ಲಂಕಾಸುರ ಚಿತ್ರವನ್ನು ವಿನೋದ್ ನಿರ್ಮಾಣ ಮಾಡುತ್ತಿದ್ದಾರೆ.
ವಿನೋದ್ ಪ್ರಭಾಕರ್ ಹಾಗೂ ಲೂಸ್ ಮಾದ ಯೋಗಿ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಚಿತ್ರದ ನಾಯಕಿಯಾಗಿ ಪಾರ್ವತಿ ಅರುಣ್ ಅಭಿನಯಿಸಿದ್ದು, ಚಿತ್ರದಲ್ಲಿ ಹಿರಿಯ ನಟರಾದ ದೇವರಾಜ್, ರವಿಶಂಕರ್ ಮುಂತಾದವರು ನಟಿಸಿದ್ದಾರೆ.
ಸದ್ಯ ಲಂಕಾಸುರ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಬೆಂಗಳೂರು ಹಾಗೂ ಗೋವಾದಲ್ಲಿ ಸುಮಾರು 65 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದ್ದು, ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್, ಕುಂಗ್ಫು ಚಂದ್ರು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಒಂದು ಸಾಹಸ ಸನ್ನಿವೇಶಕ್ಕಾಗಿ ವಿನೋದ್ ಪ್ರಭಾಕರ್ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದು, ಚಿತ್ರದ ಬಿಡುಗಡೆಗಾಗಿ ಮರಿ ಟೈಗರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪ್ರಮೋದ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರಕ್ಕೆ ವಿಜೇತ್ ಕೃಷ್ಣ ಅವರ ಸಂಗೀತ ನಿರ್ದೇಶನ, ಸುಜ್ಞಾನ್ ಅವರ ಛಾಯಾಗ್ರಹಣ, ಮುರಳಿ, ಮೋಹನ್ ಅವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನ ಇದೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರೋ ಲಂಕಾಸುರ ಸಿನಿಮಾ ತಂಡ ಪೋಸ್ಟ್ ಪ್ರೊಡಕ್ಷನ್ಸ್ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಸದ್ಯದಲ್ಲೇ ಟೀಸರ್ ಸಹ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್ ತಿಳಿಸಿದ್ದಾರೆ. ಸದ್ಯ ಲಂಕಾಸುರ ಚಿತ್ರದ ಚಿತ್ರೀಕರಣ ಮುಗಿಸಿರೋ ವಿನೋದ್ ಪ್ರಭಾಕರ್ ಆದಷ್ಟು ಬೇಗ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ.
ಓದಿ :ಗಾಡ್ ಫಾದರ್ ಇಲ್ಲದೇ ಚಿತ್ರರಂಗದಲ್ಲಿ ಸೈ ಎನಿಸಿಕೊಂಡ ಸ್ಟಾರ್ ನಿರ್ದೇಶಕನಿಗೆ ಹುಟ್ಟುಹಬ್ಬದ ಸಂಭ್ರಮ