ಕಿಚ್ಚ ಸುದೀಪ್ ಅಭಿನಯದ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಮತ್ತು ನಿರ್ಮಾಪಕ ಜಾಕ್ ಮಂಜು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಿನಿಮಾ ವಿಕ್ರಾಂತ್ ರೋಣ. ಇಂದು ನಗರದಲ್ಲಿ ಚಿತ್ರದ ತ್ರಿಡಿ ಟ್ರೈಲರ್ ಬಿಡುಗಡೆ ಮಾಡಲಾಯಿತು. ಈ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದ ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಸೃಜನ್ ಲೋಕೇಶ್, ರಾಜ್ ಬಿ ಶೆಟ್ಟಿ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಯೋಗರಾಜ್ ಭಟ್ ಅವರು ಸುದೀಪ್ ಯಾಕೆ ಬೇರೆಯವರಿಗೆ ಸ್ಫೂರ್ತಿ ಆಗ್ತಾರೆ ಅನ್ನೋದನ್ನು ಹಂಚಿಕೊಂಡರು.
ಶಿವರಾಜ್ ಕುಮಾರ್, ರವಿಚಂದ್ರನ್, ಸುದೀಪ್ ಸಮ್ಮುಖದಲ್ಲಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ, ಸುದೀಪ್ ಸಾರ್ ನನ್ನ ಹೀರೋ. ಏಕೆಂದರೆ ಸುದೀಪ್ ಸಾರ್ ಸ್ಟಾರ್ ನಟನಾಗಿದ್ದರೂ ಕೂಡ ಹೊಸ ಪ್ರತಿಭೆಗಳ ಸಿನಿಮಾಗಳನ್ನ ನೋಡಿ ಬೆನ್ನು ತಟ್ಟುವ ಆ ಒಳ್ಳೆ ಮನಸ್ಸು ನನಗೆ ಇಷ್ಟ. ನಾನು ಉಳಿದವರು ಕಂಡಂತೆ ಹಾಗೂ ಒಂದು ವಾರದ ಹಿಂದೆ ಬಿಡುಗಡೆ ಆದ ಚಾರ್ಲಿ ಸಿನಿಮಾ ನೋಡಿ ನನಗೆ ಫೋನ್ ಮಾಡಿ ಬೆನ್ನು ತಟ್ಟಿದರು. ಹೀಗಾಗಿ ಸುದೀಪ್ ಸಾರ್ ಭಾರತದ ಟಾಪ್ ಸ್ಟಾರ್ ಗಳಲ್ಲಿ ಒಬ್ಬರು ಅಂದರು.
ನಂತರ ಡಾಲಿ ಧನಂಜಯ್ ಮಾತನಾಡಿ, ತ್ರಿಡಿಯಲ್ಲಿ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ನೋಡಿ ವ್ಹಾವ್ ಅನಿಸಿತ್ತು. ನಾವು ಕನ್ನಡ ಇಂಡಸ್ಟ್ರಿಯಿಂದ ಪರಭಾಷೆಗೆ ಹೋದಾಗ ಅಲ್ಲಿ ಸುದೀಪ್ ಸಾರ್ ಹೆಸರು ಮೊದಲು ಕೇಳಿ ಬರುತ್ತದೆ. ಈಗಷ್ಟೇ ನಾನು ಎಲ್ಲಾ ನಟರ ಜೊತೆ ನಟಿಸುತ್ತಿದ್ದೇನೆ. ಅದೇ ರೀತಿ ಸುದೀಪ್ ಸಾರ್ ಜೊತೆ ಸ್ನೇಹ ಶುರುವಾಗಿದೆ. ಈ ಸಿನಿಮಾವನ್ನು ಎಲ್ಲರೂ ಫ್ಯಾಮಿಲಿ ಸಮೇತ ಬಂದು ನೋಡಬೇಕು ಅಂತಾ ಧನಂಜಯ್ ಹೇಳಿದರು. ಈ ಚಿತ್ರದಲ್ಲಿ ರಕ್ಕಮ್ಮ ಹಾಡಿಗೆ ಸುದೀಪ್ ಸಾರ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಹಾಗೆಯೇ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಚೆನ್ನಾಗಿ ಕಾಣಿಸುತ್ತಾರೆ ಅಂತಾ ಹೊಗಳಿದರು.
ನಿರ್ದೇಶಕ ಯೋಗರಾಜ್ ಭಟ್ ಸುದೀಪ್ ಸಾರ್ಗೆ ಒಂದು ಒಳ್ಳೆ ಮಾತು ಹೇಳಿದರು. ಸುದೀಪ್ ಸಾರ್ ಕಷ್ಟಕ್ಕೆ ಆಗುವ ವ್ಯಕ್ತಿ. ಅನೂಪ್ ಹಾಗು ಜಾಕ್ ಮಂಜು ಅವರ ಕಷ್ಟ ನೋಡಿದ್ದೇನೆ. ಇದೇ ರೀತಿ ಕನ್ನಡ ಚಿತ್ರರಂಗದಲ್ಲಿ ಎಲ್ಲಾರೂ ಒಟ್ಟಿಗೆ ಇರಬೇಕು ಅನ್ನೋದು ಎಲ್ಲರ ಆಸೆ ಎಂದರು.
ನನಗೆ ಹೆಮ್ಮೆಯ ವಿಷಯ: ಸುದೀಪ್ ಸಾರ್ ಸಿನಿಮಾಗಳನ್ನ ನೋಡುತ್ತಾ, ಚಿತ್ರರಂಗಕ್ಕೆ ಬಂದ ರಿಷಬ್ ಶೆಟ್ಟಿ ಮಾತನಾಡಿ, ನಾನು ಸುದೀಪ್ ಸಾರ್ ಫ್ಯಾನ್ ಆಗಿ ಬಂದಿದ್ದೀನಿ. ಇದು ವರ್ಲ್ಡ್ ವೈಡ್ ಸಿನಿಮಾ. ಮುಂದಿನ ದಿನಗಳಲ್ಲಿ ಸುದೀಪ್ ಸಾರ್ ಜೊತೆ ನಾನು ಸಿನಿಮಾ ಮಾಡುತ್ತೇನೆ ಅಂತಾ ರಿಷಬ್ ಶೆಟ್ಟಿ ಇದೇ ವೇಳೆ ಘೋಷಿಸಿದರು. ಹಾಗೇ ರಾಜ್ ಬಿ ಶೆಟ್ಟಿ ಮಾತನಾಡಿ, ನನಗೆ, ಜ್ವರ ಅಂತಾ ಹೇಳಿ ಸುದೀಪ್ ಸಾರ್ ಸಿನಿಮಾ ನೋಡುತ್ತಿದ್ದೆ. ಈಗ ಅವರ ಸಿನಿಮಾದ ಟ್ರೈಲರ್ ನೋಡಿ ಮಾತನಾಡುತ್ತಿರೋದು ನನಗೆ ಹೆಮ್ಮೆಯ ವಿಷಯ ಅಂದ್ರು.
ಸಾಕಷ್ಟು ಸಪೋರ್ಟ್ ಮಾಡಿದರು: ಈ ಚಿತ್ರದಲ್ಲಿ ರಕ್ಕಮ್ಮನಾಗಿ ಮಿಂಚಿರುವ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮೊದಲಿಗೆ ಕನ್ನಡದಲ್ಲಿ 'ನಮಸ್ಕಾರ' ಅಂತಾ ಮಾತು ಶುರು ಮಾಡಿ, ನಾನು ಈ ಸಿನಿಮಾದಲ್ಲಿ ಅಭಿನಯಿಸೋಕೆ ಸುದೀಪ್ ಸಾರ್ ಹಾಗು ನಿರ್ಮಾಪಕ ಜಾಕ್ ಮಂಜು ಕಾರಣ. ಸುದೀಪ್ ಜೊತೆ ರಕ್ಕಮ್ಮ ಹಾಡು ಚಿತ್ರೀಕರಣ ಮಾಡಬೇಕಾದ್ರೆ ಸಾಕಷ್ಟು ಸಪೋರ್ಟ್ ಮಾಡಿದರು ಖುಷಿ ವ್ಯಕ್ತಪಡಿಸಿದರು.
ಕೊನೆಯಲ್ಲಿ ಕಿಚ್ಚ ಸುದೀಪ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ಬಂದಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ರಮೇಶ್ ಅರವಿಂದ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಸೃಜನ್ ಲೋಕೇಶ್, ರಾಜ್ ಬಿ ಶೆಟ್ಟಿ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಯೋಗರಾಜ್ ಭಟ್, ಅರ್ಜುನ್ ಜನ್ಯಗೆ ಮನಃಪೂರ್ವಕ ಕೃತಜ್ಞತೆ ಹೇಳಿದರು.
ಓದಿ: ಜೀವನ ಸುತ್ತಾಟದ ಕಥಾಹಂದರ ಹೊಂದಿರುವ 'ರಂಗಿನ ರಾಟೆ'.. ಚಿತ್ರೀಕರಣ ಮುಕ್ತಾಯ