ಕಿಚ್ಚ ಸುದೀಪ್ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿರುವ ಹಾಗು ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣಾ' ಸಿನೆಮಾ ಜಗತ್ತಿನಾದ್ಯಂತ 2,500ಕ್ಕೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಅಷ್ಟೇ ಅಲ್ಲದೇ,ಬಾಕ್ಸ್ ಆಫೀಸ್‌ನಲ್ಲಿಯೂ ಸಹ 'ವಿಕ್ರಾಂತ್ ರೋಣ' ಅಬ್ಬರಿಸಿದ್ದಾನೆ.
ದೊಡ್ಡ ಸ್ಟಾರ್ ನಟರ ಸಿನಿಮಾಗಳು ಜಗತ್ತಿನೆಲ್ಲೆಡೆ ಬಿಡುಗಡೆಯಾದಾಗ ಕಲೆಕ್ಷನ್ ಬಗ್ಗೆ ಮಾತನಾಡುವುದು ಕಾಮನ್. ಅದೇ ರೀತಿ 'ವಿಕ್ರಾಂತ್ ರೋಣ' ಸಿನಿಮಾದ ಮೊದಲ ದಿನದ ಒಟ್ಟು ಗಳಿಕೆ ಕುರಿತು ಗಾಂಧಿನಗರದಲ್ಲಿ ಬೇಜಾನ್ ಟಾಕ್ ಆಗುತ್ತಿದೆ. ಅಂದುಕೊಂಡಂತೆ ಮೊದಲ ದಿನದ ಕಲೆಕ್ಷನ್ ಕೋಟಿ ಕೋಟಿ ಆಗಿದೆ ಎನ್ನಲಾಗುತ್ತಿದೆ. ಜೊತೆಗೆ ವಿಶ್ವಾದ್ಯಂತ ಮೊದಲ ದಿನ 9,000ಕ್ಕೂ ಅಧಿಕ ಪ್ರದರ್ಶನ ಕಂಡಿದೆ.
ಕರ್ನಾಟಕದಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್, 65 ಮಲ್ಟಿಪ್ಲೆಕ್ಸ್ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಮೊದಲ ದಿನ ರಾಜ್ಯದಲ್ಲಿ 2,500 ಶೋಗಳು ಪ್ರದರ್ಶನಗೊಂಡಿವೆ. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್ನಲ್ಲಿ 800 ಶೋ ಪ್ರದರ್ಶನವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಚಿತ್ರ ಪ್ರಾರಂಭಿಸಲಾಗಿತ್ತು.
ಆಂಧ್ರ, ತೆಲಂಗಾಣದಲ್ಲೂ ಸುದೀಪ್ ಹವಾ ಜೋರಾಗಿದೆ. ಹೈದರಾಬಾದ್ನಲ್ಲಿ 350 ಸಿಂಗಲ್ ಸ್ಕ್ರೀನ್ನಲ್ಲಿ ಸಿನಿಮಾ ಬಿಡುಗಡೆಯಾಗಿ ಮೊದಲ ದಿನ 1,400 ಶೋಗಳು ಪ್ರದರ್ಶನ ಕಂಡಿವೆ. ಅದೇ ರೀತಿ ತಮಿಳುನಾಡಿನಲ್ಲಿ 180 ಸಿಂಗಲ್ ಸ್ಕ್ರೀನ್ ಹಾಗೂ 70 ಮಲ್ಟಿಪ್ಲೆಕ್ಸ್ನಲ್ಲಿ ವಿಕ್ರಾಂತ್ ರೋಣ ಅಬ್ಬರಿಸಿದ್ದಾನೆ. ಕೇರಳದಲ್ಲಿ 110 ಸ್ಕ್ರೀನ್ನಲ್ಲಿ ಚಿತ್ರ ಬಿಡುಗಡೆಯಾಗಿ 600 ಕ್ಕೂ ಹೆಚ್ಚು ಶೋಗಳು ಆಗಿವೆ.
ಹಿಂದಿ ನಾಡಿನ 690 ಸ್ಕ್ರೀನ್ನಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗಿ 2,800 ಶೋ ಪ್ರದರ್ಶನವಾಗಿವೆ. ಇದರೊಂದಿಗೆ ವಿದೇಶದಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಸುದೀಪ್ ಸಿನಿಮಾ ರಿಲೀಸ್ ಆಗಿದೆ. ಓವರ್ಸೀಸ್ನ 600 ಸ್ಕ್ರೀನ್ನಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗಿ ಮೊದಲ ದಿನ 1,500 ಶೋಸ್ ಪ್ರದರ್ಶನಗೊಂಡಿದೆ.
ಈ ಅಂಕಿಅಂಶಗಳ ಆಧಾರದ ಮೇಲೆ, ಕಿಚ್ಚನ ಹೊಸ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ಗಾಂಧಿನಗರದ ಸಿನಿಮಾ ಪಂಡಿತರ ಪ್ರಕಾರ, ವಿಶ್ವಾದ್ಯಂತ 60 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ 22 ಕೋಟಿ, ತೆಲುಗು, ತಮಿಳು, ಕೇರಳ ಸೇರಿ 10 ಕೋಟಿ, ಹಿಂದಿಯಲ್ಲಿ 20 ಕೋಟಿ ಹಾಗು ವಿದೇಶಗಳಲ್ಲಿ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅಂತಾ ಹೇಳಲಾಗುತ್ತಿದೆ. ಆದರೆ ಈ ಕುರಿತು ಸಿನೆಮಾ ನಿರ್ಮಾಪಕ ಜಾಕ್ ಮಂಜು ಆಗಲಿ, ಕಿಚ್ಚ ಸುದೀಪ್ ಆಗಲಿ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ವಿಕ್ರಾಂತ್ ರೋಣನ ಅಡ್ವೆಂಚರ್, ಫ್ಯಾಂಟಸಿಗೆ ಜೈ ಹೋ ಎಂದ ಪ್ರೇಕ್ಷಕರು