ದರ್ಶನ್ ಅಭಿನಯದ ಗಜ ಚಿತ್ರದ ಹಿಟ್ ಹಾಡಿನ ಪಲ್ಲವಿಯನ್ನೇ ಟೈಟಲ್ ಮಾಡಿಕೊಂಡು ಸ್ಯಾಂಡಲ್ ವುಡ್ನಲ್ಲಿ ಗಮನ ಸೆಳೆಯುತ್ತಿರೋ ಚಿತ್ರ ಓ ಮನಸೇ. ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಓ ಮನಸೇ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯ ರಾಘವೇದ್ರ ಅವರು ಈ ಚಿತ್ರದಲ್ಲೂ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ತ್ರಿಕೋನ ಪ್ರೇಮ ಕಥೆಯಾಗಿದ್ದು, ಬಹಳ ದಿನಗಳ ನಂತರ ಕೀರ್ತಿರಾಜ್ ಅವರ ಮಗ ಧರ್ಮ ಅವರು ಬಣ್ಣ ಹಚ್ಚಿದ್ದಾರೆ.
ಓ ಮನಸೇ ಚಿತ್ರದ ಬಗ್ಗೆ ಮಾತನಾಡಿದ ವಿಜಯ ರಾಘವೇಂದ್ರ, ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಈ ನಡುವೆ ಪೊಲೀಸ್ ಪಾತ್ರಗಳು ನನಗೆ ಹೆಚ್ಚು ಬರುತ್ತಿದೆ. ಮುಂದಿನ ಎರಡು ಚಿತ್ರಗಳಲ್ಲೂ ನನ್ನದು ಪೊಲೀಸ್ ಪಾತ್ರ. ಇದಕ್ಕೆ ಕಾರಣ 'ಓ ಮನಸೇ' ತಂಡ ಎನ್ನಬಹುದು. ಏಕೆಂದರೆ ಕೊರೊನಾ ಸಮಯದಲ್ಲಿ ಬಿಡುವಿದಾಗ ಇವರು ಬಂದು ಈ ಚಿತ್ರದ ಕಥೆ ಹೇಳಿದರು. ಈ ಚಿತ್ರ ಒಪ್ಪಿದ ನಂತರ ಸಾಲು ಸಾಲು ಚಿತ್ರಗಳನ್ನು ನಾನು ಒಪ್ಪಿಕೊಂಡೆ. ತ್ರಿಕೋನ ಪ್ರೇಮಕಥೆ ಆಧಾರಿತ ಓ ಮನಸೇ ಚಿತ್ರ ಕೂಡ ಭಿನ್ನವಾಗಿ ಅಂದರು.
ಇನ್ನು ಧರ್ಮ ಕೀರ್ತಿರಾಜ್ ಕೂಡ ಮಾತನಾಡಿ, ಕೊರೋನಾ ಸಮಯದಲ್ಲಿ ಸಿನಿಮಾಗಳು ಕಡಿಮೆಯಾಗಿದ್ದವು. ಅಂತಹ ಸಮಯದಲ್ಲಿ ನಿರ್ಮಾಪಕರು ಕರೆದು ಈ ಚಿತ್ರದ ಅಡ್ವಾನ್ಸ್ ನೀಡಿದರು. ಅವರು ಕೊಟ್ಟ ಘಳಿಗೆ ಚೆನ್ನಾಗಿದೆ. ಆನಂತರ ಸಾಕಷ್ಟು ಚಿತ್ರಗಳು ಬಂದವು. ಈ ಚಿತ್ರದ ಬಗ್ಗೆ ಹೇಳಬೇಕಾದರೆ, ನಾಯಕಿಯನ್ನು ನಾನು ಹಾಗೂ ವಿಜಯ ರಾಘವೇಂದ್ರ ಇಬ್ಬರೂ ಪ್ರೀತಿಸುತ್ತೇವೆ. ಯಾರಿಗೆ ಸಿಗುತ್ತಾರೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು ಎಂದರು.
ಸಂಚಿತಾ ಪಡುಕೋಣೆ ಮಾತನಾಡಿ, ನನಗೆ ಕನ್ನಡ ಚಿತ್ರದಲ್ಲಿ ನಟಿಸಲು ಬಹಳ ಆಸೆ ಇದೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಇದರ ಜೊತೆಗೆ ಹರೀಶ್ ರಾಯ್, ಸಾಧುಕೋಕಿಲ, ಶೋಭ್ ರಾಜ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ರುಶಿಕಾ ರಾಜ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ನಿರ್ದೇಶಕ ಉಮೇಶ್ ಗೌಡ ಮಾತನಾಡಿ, ನಾನು ಕೊರೋನ ಒಂದನೇ ಅಲೆ ಮುಗಿದ ಮೇಲೆ ನಿರ್ಮಾಪಕರಲೊಬ್ಬರಾದ ರಾಮು ಅವರ ಬಳಿ ಈ ಚಿತ್ರದ ಕಥೆ ಹೇಳಿದೆ. ಅವರಿಗೆ ಕಥೆ ಇಷ್ಟವಾಗಿ, ತಮ್ಮ ಮಿತ್ರರ ಒಡಗೂಡಿ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಆನಂತರ ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಅವರಿಗೆ ಚಿತ್ರದ ಕಥೆ ಹೇಳಲಾಯಿತು. ಅವರು ಸಹ ನಟಿಸಲು ಒಪ್ಪಿದರು. ಸಂಚಿತಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾದರು. ಲವ್ ಮತ್ತು ಕ್ರೈಮ್ ಥ್ರಿಲ್ಲರ್ ಜಾನರ್ನ ಈ ಚಿತ್ರಕ್ಕೆ ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರ, ಬೆಂಗಳೂರು ಮುಂತಾದ ಕಡೆ 55 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಹಾಡುಗಳ ಚಿತ್ರೀಕರಣ ಥಾಯ್ಲೆಂಡ್ನಲ್ಲಿ ಆಗಿದೆ.
ನಿರ್ಮಾಪಕರಾದ ಎಂ.ಎನ್ ಭೈರೇಗೌಡ, ಧನಂಜಯ್, ಯುವರಾಜು, ಸು.ಕಾ.ರಾಮು ಮತ್ತು ವೆಂಕಟೇಶ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಧನು ಮಾಸ್ಟರ್ ಈ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿದ್ದಾರೆ. ರಮೇಶ್ ಹಂಡ್ರಂಗಿ ಕಥೆ ಬರೆದಿದ್ದಾರೆ. ಎಂ ಆರ್ ಸೀನು ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ಬಂಡೆ ಚಂದ್ರು ಅವರ ಸಾಹಸ ನಿರ್ದೇಶನ ಇದೆ. ಈ ಚಿತ್ರಕ್ಕೆ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಫೆಬ್ರವರಿಯಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ: ಪ್ರಭಾಸ್ ಅಭಿನಯದ 'ರಾಜಾ ಡಿಲಕ್ಸ್' ಶೂಟಿಂಗ್ ಸೀನ್‌ಗಳು ವೈರಲ್