ಅಬುಧಾಬಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಾಲಿವುಡ್ನ ತಾರಾ ಜೋಡಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವಿವಾಹವಾಗಿತ್ತು. ಮದುವೆ ನಂತರ ತಾರೆಯರ ಜೀವನದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಳ್ಳದ ಈ ತಾರಾ ಜೋಡಿಯ ವೈವಾಹಿಕ ಜೀವನದ ಕುರಿತು ಅಭಿಮಾನಿ ಬಳಗದಲ್ಲಿ ಚರ್ಚೆಯಾಗುತ್ತಿತ್ತು. ಈ ಎಲ್ಲದಕ್ಕೂ ನಟ ವಿಕ್ಕಿ ಕೌಶಲ್ ಈಗ ಪರದೆ ಎಳೆದಿದ್ದಾರೆ.
ಅಭಿಮಾನಿಗಳ ಮನಸಲ್ಲಿ ಓಡುತ್ತಿರುವ ಅದೆಷ್ಟೋ ಪ್ರಶ್ನೆಗಳಿಗೆ ಶನಿವಾರ ರಾತ್ರಿ ಅಬುಧಾಬಿಯಲ್ಲಿ IIFA 2022 ಗ್ರೀನ್ ಕಾರ್ಪೆಟ್‌ನಲ್ಲಿ ಉತ್ತರಿಸಿದ್ದಾರೆ. ತಮ್ಮ 'ಸೋಲೋ' ಅಪಿಯರೆನ್ಸ್ ವೇಳೆ ಕತ್ರಿನಾ ಜೊತೆಗಿನ ತಮ್ಮ ಮದುವೆಯ ನಂತರದ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ವಿಕ್ಕಿ ಕೌಶಲ್ ಸಂತೋಷದಿಂದಲೇ ಉತ್ತರಿಸಿದ್ದಾರೆ.
'ಜೀವನ ತುಂಬಾ ಚೆನ್ನಾಗಿ ನಡೆಯುತ್ತಿದೆ...ಸುಖಮಯವಾಗಿದೆ. ಶಾಂತಿ ತುಂಬಿದ ಅತ್ಯತ್ತಮ ಜೀವನವನ್ನು ನಡೆಸುತ್ತಿದ್ದೇವೆ. ಕತ್ರಿನಾ ತುಂಬಾ ಒಳ್ಳೆಯವಳು. ಇಲ್ಲಿ ಅವಳು ನನ್ನೊಂದಿಗೆ ಇಲ್ಲ ಎನ್ನುವುದೇ ಬೇಸರ. ಅವಳ ಉಪಸ್ಥಿತಿಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ವರ್ಷ ನಾವು ಜೊತೆಯಾಗಿ IIFA ಯಲ್ಲಿ ಭಾಗವಹಿಸುತ್ತೇವೆ ಎಂದುಕೊಳ್ಳುತ್ತೇನೆ' ಎಂದಿದ್ದಾರೆ.
ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಅವರ ಮದುವೆಯಾಗಿತ್ತು. ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರಷ್ಟೇ ಪಾಲ್ಗೊಂಡಿದ್ದರು. ಆದರೆ ಮದುವೆ ಆಗೋವರೆಗೆ ಅವರ ಸಂಬಂಧದ ಕುರಿತು ಅವರು ಎಲ್ಲೂ ಪ್ರತಿಕ್ರಿಯೆ ನೀಡಿರಲಿಲ್ಲ.
ವಿಕ್ಕಿ ಕೌಶಲ್ ಸದ್ಯ ಭೂಮಿ ಪೆಡ್ನೇಕರ್ ಮತ್ತು ಕಿಯಾರಾ ಅಡ್ವಾಣಿ ಅವರೊಂದಿಗೆ 'ಗೋವಿಂದಾ ನಾಮ್ ಮೇರಾ' ಸಿನಿಮಾದಲ್ಲಿ ಹಾಗೂ ಇನ್ನೂ ಹೆಸರಿಡದ ಸಾರಾ ಅಲಿ ಖಾನ್ ಮತ್ತು ಆನಂದ್ ತಿವಾರಿ ಅವರ ಜೊತೆಗೆ ಹಾಗೂ ಲಕ್ಷ್ಮಣ್ ಉಟೇಕರ್ ಅವರ ಜೊತೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಆ ಎರಡೂ ಚಿತ್ರಗಳಿಗೆ ಇನ್ನೂ ಹೆಸರಿಟ್ಟಿಲ್ಲ. ವಿಜಯ್ ಸೇತುಪತಿ ಜೊತೆಗಿನ 'ಮೆರ್ರಿ ಕ್ರಿಸ್‌ಮಸ್' ಮತ್ತು ಸಲ್ಮಾನ್ ಖಾನ್ ಜೊತೆಗಿನ 'ಟೈಗರ್ 3' ನಲ್ಲಿ ಕತ್ರಿನಾ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: "ಲಂಕಾಸುರ"ನಾಗಿ ತೆರೆ ಮೇಲೆ ಬರುತ್ತಿದ್ದಾರೆ ವಿನೋದ್ ಪ್ರಭಾಕರ್