ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ಮುಂದಿನ ಸಿನಿಮಾದ ಹೆಸರು 'ಸ್ಯಾಮ್ ಬಹದ್ದೂರ್'. 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಇವರ ಕೊನೆಯ ಸಿನಿಮಾ ಆಗಿತ್ತು. ಇತ್ತೀಚೆಗೆ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಕಂಡಿತ್ತು. ಇದೀಗ ಬಿಡುಗಡೆಗೆ ಸಜ್ಜಾಗುತ್ತಿರುವ 'ಸ್ಯಾಮ್ ಬಹದ್ದೂರ್' ಮೇಲೆ ಅಭಿಮಾನಿಗಳಿಗೂ ಸಾಕಷ್ಟು ನಿರೀಕ್ಷೆ ಇದೆ.
ಸ್ಯಾಮ್ ಬಹದ್ದೂರ್: 'ಸ್ಯಾಮ್ ಬಹದ್ದೂರ್' ಜಪದಲ್ಲಿರುವ ವಿಕ್ಕಿ ಕೌಶಲ್ ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಪೋಸ್ಟರ್ ಪೋಸ್ಟ್ ಮಾಡಿದ್ದಾರೆ. ಟೀಸರ್ ಬಿಡುಗಡೆಗೆ ಒಂದಿನ ಬಾಕಿ ಇರುವಂತೆ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದು. ಡಿಸೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಸ್ಯಾಮ್ ಮಾಣೆಕ್ ಶಾ ಪಾತ್ರದಲ್ಲಿ ವಿಕ್ಕಿ: ನಟ ವಿಕ್ಕಿ ಚಿತ್ರದಲ್ಲಿ ಭಾರತದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಪಾತ್ರ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಅವರು ಸೇನಾ ಸಮವಸ್ತ್ರದಲ್ಲಿರುವುದನ್ನು ಕಾಣಬಹುದು. 'ಜಿಂದಗಿ ಉನ್ಕಿ, ಇತಿಹಾಸ್ ಹಮಾರಾ' (ಜೀವನ ಅವರದ್ದು, ಇತಿಹಾಸ ನಮ್ಮದು) ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ನಾಳೆ ಟೀಸರ್ ಬಿಡುಗಡೆ: ಮೇಘನಾ ಗುಲ್ಜಾರ್ ಆ್ಯಕ್ಷನ್ ಕಟ್ ಹೇಳಿರುವ ಸ್ಯಾಮ್ ಬಹದ್ದೂರ್ ಟೀಸರ್ ನಾಳೆ (ಅಕ್ಟೋಬರ್ 13) ಬಿಡುಗಡೆ ಆಗಲಿದೆ. ಇಂದು ಅನಾವರಣಗೊಂಡಿರುವ ಪೋಸ್ಟರ್, ಟೀಸರ್ ಮೇಲಿನ ಕುತೂಹಲ ಹೆಚ್ಚಿಸಿದೆ. ಮುಂಬರುವ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲೂ ಟೀಸರ್ ಪ್ರದರ್ಶಿಸಲಾಗುತ್ತದೆ ಎಂದು ತಿಳಿದುಬಂದಿದೆ.
ದೇಶದ ಮೊದಲ ಫೀಲ್ಡ್ ಮಾರ್ಷಲ್ ಕಥೆ: ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್ ಮಾಣೆಕ್ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ಸ್ಯಾಮ್ ಮಾಣೆಕ್ ಶಾ ಅವರು ಫೀಲ್ಡ್ ಮಾರ್ಷಲ್ ಹುದ್ದೆಗೇರಿದ ಮೊದಲ ಭಾರತೀಯ ಸೇನಾ ಅಧಿಕಾರಿ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿ, ನಾಲ್ಕು ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಐದು ಯುದ್ಧಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ: 'ಮಕ್ಕಳಿಗಾಗಿಯೇ ಓಎಂಜಿ 2 ಮಾಡಿದ್ದು, ದುರಾದೃಷ್ಟವಶಾತ್ ಎ ಸರ್ಟಿಫಿಕೇಟ್ ಸಿಕ್ಕಿತು': ಅಕ್ಷಯ್ ಕುಮಾರ್
ವಿಕ್ಕಿ ಕೌಶಲ್ ಇದಕ್ಕೂ ಮುನ್ನ ದೇಶಭಕ್ತಿ ಕುರಿತಾದ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. 'ಉರಿ: ದಿ ಸರ್ಜಿಕಲ್ ಸ್ಟ್ರೈಕ್', 'ಸರ್ದಾರ್ ಉಧಮ್ ಸಿಂಗ್', 'ರಾಝಿ' ಎಂಬ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆ ಫಾತಿಮಾ ಸನಾ ಶೇಖ್ ಮತ್ತು ಸಾನ್ಯಾ ಮಲ್ಹೋತ್ರಾ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: ಹೆಚ್ಚಿನ ಭಾರತೀಯರು ಥಿಯೇಟರ್ಗಳಲ್ಲೇ ಸಿನಿಮಾ ವೀಕ್ಷಿಸಲು ಬಯಸುತ್ತಾರೆ: ಅಧ್ಯಯನ