ಹೈದರಾಬಾದ್: ಬಾಲಿವುಡ್ ನಟರಾದ ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಇತ್ತೀಚೆಗೆ ತಮ್ಮ 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರದ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನವನ್ನೂ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲಿ 40 ಕೋಟಿ ರೂ. ಬಾಚಿಕೊಂಡು ಮುನ್ನುಗ್ಗುತ್ತಿದೆ.
ಇನ್ನು ಚಿತ್ರದ ಪ್ರಚಾರವನ್ನು ಚಿತ್ರದ ನಟ- ನಟಿ ಕಪಿಲ್ ಶರ್ಮಾ ಶೋನಲ್ಲಿ ಭರ್ಜರಿಯಾಗೇ ಪ್ರಚಾರ ಮಾಡಿದರು. ಲಕ್ಷ್ಮಣ್ ಉಟೇಕರ್ ಅವರ ಚಿತ್ರದಲ್ಲಿ ವಿವಾಹಿತ ಜೋಡಿ ಅಡುಗೆಮನೆಯಲ್ಲಿ ಪ್ರಣಯ ಮಾಡುತ್ತಿರುವ ದೃಶ್ಯವನ್ನು ಶೋ ನಲ್ಲಿ ಪ್ರದರ್ಶಿಸಿ ಗಮನ ಸೆಳೆದರು. ಈ ಶೋ ನಲ್ಲಿ ಕಪಿಲ್, ದೃಶ್ಯಗಳನ್ನು ತೋರಿಸುತ್ತಾ ನಟ ವಿಕ್ಕಿಯ ಕಡೆಗೆ ತಿರುಗಿ, ಮದುವೆಗೆ ಮೊದಲು ನೀವು ಮತ್ತು ಕತ್ರಿನಾ ಕೈಫ್ ಎಲ್ಲಿ ಭೇಟಿಯಾಗಿದ್ದಿರಿ ಎಂಬ ಪ್ರಶ್ನೆ ಮುಂದಿಟ್ಟರು.
"ನಿಜ ಜೀವನದಲ್ಲಿ ನೀವು ಮತ್ತು ಕತ್ರಿನಾ ಡೇಟಿಂಗ್ ಮಾಡಲು ಪ್ರಾರಂಭಿಸಿದಾಗ ಅದು ಯಾರಿಗೂ ತಿಳಿದಿರಲಿಲ್ಲ, ನೀವು ಮತ್ತು ಕತ್ರಿನಾ ಎಲ್ಲಿ ಭೇಟಿಯಾಗಿದ್ದೀರಿ, ನೀವು ಎಂದಿಗೂ ಸಿಕ್ಕಿಹಾಕಿಕೊಳ್ಳಲಿಲ್ಲವೇ?" ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಮುಗಳು ನಗೆ ಬೀರಿದ ವಿಕ್ಕಿ ಮುಸಿಮುಸಿ ನಗುತ್ತಾ, "ಪಾಜಿ, ಇದು ಬಹಳ ದೊಡ್ಡ ರಹಸ್ಯ." ಎಂದು ಹಾಸ್ಯ ಚಟಾಕಿ ಹಾರಿಸಿದರು.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಮದುವೆಯಾಗುವ ಮೊದಲು ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ದಂಪತಿಗಳು ಡಿಸೆಂಬರ್ 9, 2021 ರಂದು ರಾಜಸ್ಥಾನದಲ್ಲಿ ನಡೆದ ಐಷಾರಾಮಿ ಸಮಾರಂಭದಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇನ್ನು ಕಾಮಿಡಿ ಶೋನಲ್ಲಿ ಸಾರಾ ಕಾಲೆಳೆದ ಕಪಿಲ್, ಸಾರಾ ಕಡೆಗೆ ನೋಡುತ್ತಾ ಪ್ರೀತಿಯನ್ನು ರಹಸ್ಯವಾಗಿಡಬೇಕು ಅಥವಾ ಜಗತ್ತಿಗೆ ಘೋಷಿಸಬೇಕು ಎಂದು ನೀವು ನಂಬುತ್ತೀರಾ ಎಂಬ ಪ್ರಶ್ನೆ ಎಸೆದರು. ಇದಕ್ಕೆ ಉತ್ತರಿಸಿದ ಸಾರಾ, "ನೀವು ಯಾರನ್ನು ಪ್ರೀತಿಸುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ" ಎಂದು ತಟ್ಟಂಥಾ ಉತ್ತರ ಕೊಟ್ಟರು.
ಕಪಿಲ್ ಸಾರಾ ಮತ್ತಷ್ಟು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು. ಭವಿಷ್ಯದಲ್ಲಿ ಯಾರಿಗಾದರೂ ತನ್ನ ಪ್ರೀತಿಯನ್ನು ಬಹಿರಂಗಪಡಿಸುತ್ತೀರಾ ಅಥವಾ ಮರೆಮಾಚುತ್ತೀರಾ ಎಂದು ಕೇಳಿದರು. ಇದಕ್ಕೆ ಸಾರಾ, "ಮತ್ತೆ, ಅದು ಇನ್ನೊಬ್ಬ ವ್ಯಕ್ತಿ ಯಾರು ಎಂಬುದರ ಮೇಲೆ ಅವಲಂಬಿತವಾಗಿದೆ ಎಂಬ ಬೋಲ್ಡ್ ಆನ್ಸರ್ ಮಾಡಿದರು. ನಾನು ಈ ಬಗ್ಗೆ ನನ್ನ ಪೋಷಕರಿಗೆ (ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್) ಹೇಳಿದರೆ ನಾನು ಇದನ್ನು ಎಲ್ಲರಿಗೂ ಹೇಳಬಲ್ಲೆ ಎಂಬ ಹಾಸ್ಯ ಚಟಾಕಿಯನ್ನೂ ಹಾರಿಸಿದರು. ನಂತರ ಕಪಿಲ್ ಸಾರಾಳನ್ನು ಮತ್ತೆ ಪ್ರಶ್ನಿಸಿದರು. ಯಾರನ್ನಾದರೂ ನೋಡುತ್ತಿದ್ದೀರಾ ಎಂದು ಕೇಳಿದರು. ಸಾರಾ ಇದಕ್ಕೆ ಏನೂ ಹೇಳಲಿಲ್ಲ.
ಆದರೆ ಅವರು ಲವ್ ಆಜ್ ಕಲ್ ನಟ ಕಾರ್ತಿಕ್ ಆರ್ಯನ್ ಮತ್ತು ಅವರ ಕೇದಾರನಾಥ್ ಸಹ - ನಟ ಸುಶಾಂತ್ ಸಿಂಗ್ ರಜಪೂತ್ ಇಬ್ಬರೊಂದಿಗೂ ಸಲುಗೆಯಿಂದ ಇರುವ ಗುಸು - ಗುಸು ಬಾಲಿವುಡ್ನಲ್ಲಿ ಹರಿದಾಡಿದ್ದಂತೂ ಸುಳ್ಳಲ್ಲ.
ಇದನ್ನು ಓದಿ: Pathaan: 3,000ಕ್ಕೂ ಹೆಚ್ಚು ಪರದೆಯಲ್ಲಿ ರಷ್ಯಾ, ಸಿಐಎಸ್ ದೇಶಗಳಲ್ಲಿ ತೆರೆ ಕಾಣಲಿದೆ ಶಾರುಖ್ ನಟನೆಯ 'ಪಠಾಣ್'