ಕನ್ನಡ ಚಿತ್ರರಂಗದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಚಿತ್ರದ ಕಥೆ ಶ್ವಾನ ಪ್ರಿಯರ ಮನಗೆದ್ದಿತ್ತು. ಕನ್ನಡ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಂಡ ಈ ಚಿತ್ರ ಬಹುಭಾಷಾ ಪ್ರೇಕ್ಷಕರ ಮನಮುಟ್ಟಿತ್ತು. ಇದೀಗ ಶ್ವಾನದ ಕಥೆ ಆಧರಿಸಿರುವ ಮತ್ತೊಂದು ಸಿನಿಮಾ ಶ್ವಾನ ಪ್ರಿಯರಿಗಾಗಿ ರೆಡಿ ಆಗಿದೆ. ''ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್" ಚಿತ್ರದ ಶೀರ್ಷಿಕೆ.
ಮನ ಮುಟ್ಟುವ ಕಥೆ: ಮಲಯಾಳಂ ಸಿನಿಮಾ ಆಗಿರುವ "ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್''ನ ಥಿಯೇಟ್ರಿಕಲ್ ರೈಟ್ಸ್ ಅನ್ನು ಕೇರಳ ರಾಜ್ಯ ಹೊರತುಪಡಿಸಿ ವಿಶ್ವದಾದ್ಯಂತ ಕೆಆರ್‌ಜಿ ಸ್ಟುಡಿಯೋಸ್ ಬಾಚಿಕೊಂಡಿದೆ. ವಾಲಟ್ಟಿ ಚಿತ್ರವು ಅದ್ಭುತವಾಗಿ ಸಾಗುವ ಸಾಕು ನಾಯಿಗಳ ಗ್ಯಾಂಗ್ ಬಗೆಗಿನ ಕಥೆ. ಮನ ಮುಟ್ಟುವ ಕಥೆಯನ್ನು ವಾಲಟ್ಟಿ ಚಿತ್ರ ಹೊಂದಿದ್ದು, ಅಮೋಘ ಸಾಹಸಮಯ ದೃಶ್ಯಗಳು ಸಹ ಇರಲಿದೆ. ಈ ಚಿತ್ರದ ಆಸಕ್ತಿಕರ ವಿಷಯವೆಂದರೆ, ಮಲಯಾಳಂನ ಜನಪ್ರಿಯ ನಟರಾದ ರೋಷನ್ ಮ್ಯಾಥ್ಯೂ, ಸೌಬಿನ್ ಶಾಹಿರ್, ಇಂದ್ರನ್ಸ್, ಸನ್ನಿ ವೇಯ್ನ್, ಸೈಜು ಕುರುಪ್ ಮತ್ತು ಇತರರು ಶ್ವಾನ ಪಾತ್ರಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.
ಇಡೀ ಭಾರತೀಯ ಸಿನಿ ವಲಯದಲ್ಲಿ ಇದೇ ಮೊದಲ ಬಾರಿಗೆ ಕ್ಯಾನೈನ್ (ಸೋಂಕು) ಮತ್ತು ಸಾಕುಪ್ರಾಣಿಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರೋ ಸಿನಿಮಾ ಇದು. ನೋಡುಗರ ಮನಸೆಳೆಯುವ ತಾಜಾ ದೃಶ್ಯಗಳಲ್ಲದೇ, ಪ್ರೀತಿ, ಕಾಮಿಡಿ ಹಾಗೂ ಅಡ್ವೆಂಚರಸ್ ಎಲಿಮೆಂಟ್ಸ್ಗಳನ್ನೂ ಕೂಡ ಸಿನಿಮಾ ಹೊಂದಿದೆ. ವಿಭಿನ್ನ, ತಾಜಾ ಕಥೆ ಹೇಳುವ ಮೂಲಕ ಕಿರಿಯ ಮತ್ತು ಹಿರಿಯ ಪ್ರೇಕ್ಷಕರನ್ನು ಆಕರ್ಷಿಸಲು 'ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್" ರೆಡಿ ಆಗಿದೆ.
ಕೆಆರ್‌ಜಿ ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ ಈ "ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್''ನ ಥಿಯೇಟ್ರಿಕಲ್ ರೈಟ್ಸ್ ಖಚಿತವಾಗಿದೆ ಎಂದು ತಿಳಿಸಿದ್ದಾರೆ. ದಿಲ್ ರಾಜು ಅವರು ತೆಲುಗಿನಲ್ಲಿ, ಅನಿಲ್ ತದಣಿ ಹಿಂದಿಯಲ್ಲಿ ಹಂಚಿಕೆಯ ಜವಾಬ್ದಾರಿಯನ್ನು ಹೊತ್ತಿದ್ದು, ಓವರ್ ಸೀಸ್ ಡಿಸ್ಟ್ರಿಬ್ಯೂಶನ್ ಅನ್ನು ಹೋಮ್ ಸ್ಕ್ರೀನ್ ಎಂಟರ್ಟೈನ್ಮೆಂಟ್ ವಹಿಸಿಕೊಂಡಿದೆ.
ಇದನ್ನೂ ಓದಿ: 'Adipurush' ಸಿನಿಮಾದ ಕೆಲ ದೃಶ್ಯ ಕತ್ತರಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ ಹಿಂದೂ ಸೇನೆ
ವಾಲಟ್ಟಿ ಬಿಡುಗಡೆ ದಿನಾಂಕ: ವಾಲಟ್ಟಿ ಸಿನಿಮಾವನ್ನು ವಿಜಯ್ ಬಾಬು ಪ್ರಸ್ತುತ ಪಡಿಸಿದ್ದು, ಫ್ರೈಡೇ ಫಿಲ್ಮ್ ಹೌಸ್ ನಿರ್ಮಿಸಿದೆ. ದೇವನ್ ಅವರು ಆ್ಯಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದಾಗಿದೆ. ಸಿನಿಮಾ ಜುಲೈ 14 ರಂದು ಮಲಯಾಳಂನಲ್ಲಿ ತೆರೆಕಾಣಲು ಸಜ್ಜಾಗಿದೆ. ಒಂದು ವಾರದ ನಂತರ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಪ್ರಪಂಚದಾದ್ಯಂತ ಬಿಡುಗಡೆಗೊಳ್ಳಲಿದೆ.
ಇದನ್ನೂ ಓದಿ: 140 ಕೋಟಿ ಬಾಚಿದ 'ಆದಿಪುರುಷ್': ಮೊದಲ ದಿನವೇ 100 ಕೋಟಿ ಗಡಿ ದಾಟಿದ ಪ್ರಭಾಸ್ರ ಮೂರನೇ ಸಿನಿಮಾ