ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ಅಬ್ಬರಿಸಿದವರು ವಜ್ರಮುನಿ. ಇದೀಗ ಇವರ ಮೊಮ್ಮಗ ಆಕರ್ಶ್ ಬಾಲನಟನಾಗಿ ಸ್ಯಾಂಡಲ್ವುಡ್ಗೆ ಪರಿಚಿತರಾಗುತ್ತಿದ್ದಾರೆ. 'ಯಲಾ ಕುನ್ನಿ' ಚಿತ್ರದಲ್ಲಿ ನಟಿಸುತ್ತಿದ್ದು, ಮುಹೂರ್ತ ಸಮಾರಂಭ ಇತ್ತೀಚೆಗೆ ವಿಜಯನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ವಜ್ರಮುನಿ ಅವರ ಜನಪ್ರಿಯ ಡೈಲಾಗ್ ಆಗಿರುವ ಯಲಾಕುನ್ನಿ ಪದವನ್ನೇ ಚಿತ್ರದ ಶೀರ್ಷಿಕೆ ಮಾಡಲಾಗಿದ್ದು "ಮೇರಾ ನಾಮ್ ವಜ್ರಮುನಿ!" ಎಂಬ ಅಡಿಬರಹ ಕೂಡ ಇರುವುದು ಮತ್ತೊಂದು ವಿಶೇಷ.
ವಜ್ರಮುನಿ ಕುಟುಂಬದ ಎಲ್ಲ ಸದಸ್ಯರು ಸಮಾರಂಭಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು. ವಜ್ರಮುನಿ ಧರ್ಮಪತ್ನಿ ಲಕ್ಷ್ಮೀ ವಜ್ರಮುನಿ ಕ್ಯಾಮರಾಗೆ ಚಾಲನೆ ನೀಡಿದರು. ಹಿರಿಯ ಪುತ್ರ ವಿಶ್ವನಾಥ್ ಕ್ಲಾಪ್ ಮಾಡಿದರು. ಕಿರಿಯ ಪುತ್ರ ಜಗದೀಶ್ ವಜ್ರಮುನಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿದ್ದರು.
ಇದೇ ಮೊದಲ ಬಾರಿಗೆ ಕೋಮಲ್ ದ್ವಿಪಾತ್ರದಲ್ಲಿ ನಟಿಸುತ್ತಿರುವುದು ಚಿತ್ರದ ವಿಶೇಷತೆ. ಈ ಕುರಿತು ಮಾತನಾಡಿದ ಅವರು, "ಚಿತ್ರದ ಮುಕ್ಕಾಲು ಭಾಗ 1981 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಗಂಜಾಂ ಬಳಿ ಪುರಾತನ ದೇವಾಲಯವಿದ್ದು, ಅಲ್ಲಿಯೇ ಹೆಚ್ಚಿನ ಚಿತ್ರೀಕರಣವಾಗಲಿದೆ. ಇದಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗುವುದು, ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ" ಎಂದರು.
ಚಿತ್ರವನ್ನು ಪ್ರದೀಪ್ ನಿರ್ದೇಶಿಸುತ್ತಿದ್ದು, ಚಿತ್ರಕಥೆ ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಈ ಹಿಂದೆ "ಸಡಗರ" ಚಿತ್ರ ನಿರ್ಮಿಸಿದ್ದ ಮಹೇಶ್ ಗೌಡ್ರು ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ಬಾರಿಗೆ ನಾಯಕ ನಟಿಯಾಗಿ ನಿಸರ್ಗ ಸ್ಯಾಂಡಲ್ವುಡ್ ಪ್ರವೇಶ ಮಾಡುತ್ತಿದ್ದಾರೆ. ಯತಿರಾಜ್ ಜಗ್ಗೇಶ್, ಫ್ರೆಂಚ್ ಬಿರಿಯಾನಿ ಮಹಾಂತೇಶ್, ಜಯಸಿಂಹ ಮುಸುರಿ, ಅರವಿಂದ್ ರಾವ್, ಮಂಜು ಪಾವಗಡ, ರಾಜು ತಾಳಿಕೋಟೆ, ಶಿವರಾಜ್, ಬಿರಾದರ್, ವೆಂಕಟೇಶ್ ಪ್ರಸಾದ್, ಉಮೇಶ್ ಸಕ್ಕರೆನಾಡು, ಅನಿಲ್ ಯಾದವ್ ಇನ್ನೂ ಹಲವರ ತಾರಾ ಬಳಗವೇ ಚಿತ್ರದಲ್ಲಿದೆ.
ಕೋಮಲ್ ಕುಮಾರ್ ಚಿತ್ರದಲ್ಲಿ ವಜ್ರಮುನಿಯಾದರೆ, ಅವರ ಬಲಗೈ ಬಂಟನಾಗಿ ಜಯಸಿಂಹ ಮುಸುರಿ "ಕನೆಕ್ಷನ್ ಕಾಳಪ್ಪ"ನಾಗಿ ಕಾಣಿಸಿಕೊಳ್ಳಲಿದ್ದಾರೆ. ಗೋವಿನ ಹಾಡಿನಲ್ಲಿ ಬರುವ ವ್ಯಾಘ್ರ ಹುಲಿ ಅರ್ಭುತ ಮತ್ತು ಸತ್ಯವೇ ಭಗವಂತನೆಂದ ಪುಣ್ಯಕೋಟಿಯ ಕಥೆಯಿಂದ ಚಿತ್ರಪ್ರೇರಿತವಾಗಿದೆ. ಧರ್ಮವಿಶ್ ಸಂಗೀತ ನಿರ್ದೇಶನ ಹಾಗೂ ಉದಯ್ ಲೀಲಾ ಅವರ ಛಾಯಾಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ಸಾಹಸ ನಿರ್ದೇಶನವನ್ನು ವಿನೋದ್ ಮಾಡಿದ್ದಾರೆ. ಇದೇ ಏಪ್ರಿಲ್ನಿಂದ ಚಿತ್ರ ಸೆಟ್ಟೇರಲಿದ್ದು, ಚಿತ್ರತಂಡಕ್ಕೆ ಲಕ್ಷ್ಮೀ ವಜ್ರಮುನಿ ಶುಭ ಹಾರೈಸಿದರು.
ಇದನ್ನೂ ಓದಿ: ಲಿಖಿತ್ ಶೆಟ್ಟಿ ನಿರ್ಮಿಸಿ ನಟಿಸುತ್ತಿರುವ 'ಫುಲ್ ಮೀಲ್ಸ್' ಪೋಸ್ಟರ್ ಬಿಡುಗಡೆ