ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳ ಟ್ರೆಂಡ್ ಶುರುವಾಗಿದೆ. ಉತ್ತಮ ಕಥೆಯುಳ್ಳ ಸಿನಿಮಾಗಳು ನಿರ್ಮಾಣವಾಗಿದೆ. ಇದೀಗ ವೈಶಂಪಾಯನ ತೀರ ಅನ್ನೋ ಟೈಟಲ್ ಇಟ್ಟುಕೊಂಡು ಚಿತ್ರವೊಂದು ಬರುತ್ತಿದೆ. ರಂಗಕರ್ಮಿ ರಮೇಶ್ ಬೇಗಾರು ನಿರ್ದೇಶಿಸಿರುವ ವೈಶಂಪಾಯನ ತೀರ ಚಿತ್ರದ ಟ್ರೈಲರ್ ಹಲವು ಗಣ್ಯರ ಸಮ್ಮುಖದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ವೈಶಂಪಾಯನ ತೀರ ಟ್ರೈಲರ್: ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ, ಸಂಗೀತ ನಿರ್ದೇಶಕ ಗುರುಕಿರಣ್, ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಸೇರಿದಂತೆ ಹಲವು ಗಣ್ಯರು ಸೇರಿ ವೈಶಂಪಾಯನ ತೀರ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಯಿಸಿದರು.
- " class="align-text-top noRightClick twitterSection" data="">
ಸಿನಿಮಾದಲ್ಲಿ ಯಕ್ಷಗಾನ ಕಲೆ: ವೈಶಂಪಾಯನ ತೀರ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ರಮೇಶ್ ಬೇಗಾರು ಸುಮಾರು ಮೂರು ದಶಕಗಳಿಂದ ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರಿಗೆ ಹೆಚ್ಚಿನ ಅನುಭವವಿದೆ. ಯಕ್ಷಗಾನದಂತಹ ಕಲೆಯನ್ನು ಹೊಸ ಆಯಾಮದಲ್ಲಿ ನೋಡುವಂತ ಅಪರೂಪದ ಪ್ರತಿಭಾವಂತ ವ್ಯಕ್ತಿ ಎಂದರೆ ಅದು ರಮೇಶ್. ನಾನು ಕೂಡ ಈ ಚಿತ್ರವನ್ನು ನೋಡಲು ಕಾತರನಾಗಿದ್ದೇನೆ ಎಂದು ತಿಳಿಸಿದರು.
ಮಲೆನಾಡ ಸಂಸ್ಕೃತಿ ಈ ಚಿತ್ರದಲ್ಲಿದೆ: ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಇದೊಂದು ವಿಭಿನ್ನ ಕಥೆಯ ಚಿತ್ರ. ಮಲೆನಾಡ ಸಂಸ್ಕೃತಿಯನ್ನು ನಿರ್ದೇಶಕರು ಮನಮುಟ್ಟುವಂತೆ ತೋರಿಸಿದ್ದಾರೆ. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಮಲೆನಾಡಿನಲ್ಲಿ ಚಿತ್ರೀಕರಣ: ಬಳಿಕ ನಿರ್ದೇಶಕ ರಮೇಶ್ ಬೇಗಾರು ಮಾತನಾಡಿ, ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣ ಕಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣವಾಗಿದೆ. ಯಕ್ಷಗಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಕೃತಿ ಮತ್ತು ಪುರುಷನ ಸಂಬಂಧವನ್ನು ವಿಭಿನ್ನವಾದ ಧಾಟಿಯಲ್ಲಿ ನಿರೂಪಿಸಲಾಗಿದೆ. ಇಡೀ ಸಿನಿಮಾವನ್ನು ಕೊಪ್ಪ ಮತ್ತು ಶೃಂಗೇರಿಯ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಮಲೆನಾಡ ಭಾಷೆ, ಜನಜೀವನ ಮತ್ತು ಸಂಸ್ಕೃತಿಯನ್ನು ತೆರೆಯ ಮೇಲೆ ತರಲಾಗಿದೆ ಎಂದರು.

ವೈಶಂಪಾಯನ ತೀರ ಚಿತ್ರತಂಡ: ವೈಶಂಪಾಯನ ತೀರ ಸಿನಿಮಾದಲ್ಲಿ ವೈಜಯಂತಿ ಅಡಿಗ ನಾಯಕಿಯಾಗಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ರವೀಶ್ ಹೆಗಡೆ, ಪ್ರಸನ್ನ ಶೆಟ್ಟಿಗಾರ್, ರಮೇಶ್ ಭಟ್, ಗುರುರಾಜ ಹೊಸಕೋಟೆ, ಶೃಂಗೇರಿ ರಾಮಣ್ಣ, ರವಿಕುಮಾರ್, ಸತೀಶ್ ಪೈ, ಸಂತೋಷ್ ಪೈ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆಸ್ಕರ್ಗೆ ಅಂಗಳದಲ್ಲಿ 'ಚೆಲ್ಲೊ ಶೋ': ಎಡಿಟಿಂಗ್ ಕೆಲಸದ 'ಶ್ರೇಯಸ್ಸು' ಈ ಕನ್ನಡಿಗನಿಗೂ ಸಲ್ಲಬೇಕು!
ಜನವರಿ 6ರಂದು ಚಿತ್ರ ಬಿಡುಗಡೆ: ಶ್ರೀನಿಧಿ ಕೊಪ್ಪ ಸಂಗೀತ ಸಂಯೋಜಿಸಿದ್ದು, ವಿನು ಮನಸು ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಶಶೀರ ಶೃಂಗೇರಿ ಛಾಯಾಗ್ರಹಣ ಹಾಗೂ ಅವಿನಾಶ್ ಶೃಂಗೇರಿ ಅವರ ಸಂಕಲನವಿದೆ. ಸ್ವರಸಂಗಮ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಆರ್. ಸುರೇಶ ಬಾಬು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವೈಶಂಪಾಯನ ತೀರ ಚಿತ್ರ ಜನವರಿ 6ರಂದು ತೆರೆಗೆ ಬರಲಿದೆ.
ಮಲೆನಾಡ ಸಂಸ್ಕೃತಿಯ ವೈಭವೀಕರಣ: ದಕ್ಷಿಣ ಕನ್ನಡ ಸಂಸ್ಕೃತಿಯುಳ್ಳ ಕಾಂತಾರ ಚಿತ್ರ ಯಾರೂ ನಿರೀಕ್ಷೆ ಮಾಡದಷ್ಟು ಮಟ್ಟಿಗೆ ಯಶಸ್ಸು ಕಂಡಿತು. ತುಳುನಾಡ ಸಂಸ್ಕೃತಿಯನ್ನು ತೆರೆ ಮೇಲೆ ವೈಭವೀಕರಿಸಲಾಗಿತ್ತು. ಇದೀಗ ಮಲೆನಾಡ ಸಂಸ್ಕೃತಿಯುಳ್ಳ ವೈಶಂಪಾಯನ ತೀರ ಸಿನಿಮಾ ಜನರನ್ನು ತಲುಪಲಿದೆ ಅನ್ನೋದು ಚಿತ್ರತಂಡದ ನಂಬಿಕೆ.
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಶಿವಣ್ಣನ 125ನೇ ಚಿತ್ರದ ಅಬ್ಬರ: 'ವೇದ' ಕಲೆಕ್ಷನ್ ಎಷ್ಟು ಗೊತ್ತಾ?