ಇಂದೋರ್ (ಮಧ್ಯ ಪ್ರದೇಶ್): 'ಬಿಗ್ ಬಾಸ್' ಸೇರಿದಂತೆ ಅನೇಕ ಟಿವಿ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಕಿರುತೆರೆ ನಟಿ ವೈಶಾಲಿ ಠಕ್ಕರ್ ಮೃತದೇಹ ಇಂದೋರ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತದೇಹದ ಬಳಿ ಡೆತ್ ನೋಟ್ ಕೂಡ ಸಿಕ್ಕಿದೆ. ಈ ಘಟನೆಗೆ ಸಂಬಂಧಿಸಿದಂತೆ ತೇಜಾಜಿ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಕಳೆದ ಒಂದು ವರ್ಷದಿಂದ ವೈಶಾಲಿ ಠಕ್ಕರ್ ಅವರು ಇಂದೋರ್ನಲ್ಲಿ ವಾಸಿಸುತ್ತಿದ್ದರು. ಇದೀಗ ಆತ್ಮಹತ್ಯೆಗೆ ಶರಣಾಗಿದ್ದು ಕುಟುಂಬಸ್ಥರಿಗೆ, ಆಪ್ತರಿಗೆ ಮತ್ತು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.
ನಟಿಯ ಕಿರಿಯ ಸಹೋದರ ಮತ್ತು ತಂದೆ ಸಹ ವೈಶಾಲಿ ಠಕ್ಕರ್ ಅವರ ಮನೆಯಲ್ಲಿ ವಾಸವಾಗಿದ್ದರು. ನಟಿ ತಮ್ಮ ಕೋಣೆಯಲ್ಲಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆ. ಎಷ್ಟು ಹೊತ್ತಾದರೂ ಎಚ್ಚರವಾಗದಿದ್ದಾಗ ತಂದೆ ಹೋಗಿ ಮಗಳ ಕೋಣೆಯ ಬಾಗಿಲು ಬಡಿದ್ದಾರೆ. ಬಾಗಿಲು ತೆರೆಯದಿದ್ದಾಗ ಕಿಟಕಿಯಿಂದ ಕೊಠಡಿಯೊಳಗೆ ನೋಡಿದ್ದು, ನೇಣಿಗೆ ಶರಣಾಗಿರುವುದು ಅರಿವಿಗೆ ಬಂದಿದೆ. ಕೂಡಲೇ ತಂದೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ಡೆತ್ ನೋಟ್ ಹಾಗೂ ಮೊಬೈಲ್ ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: 'ಕಾಂತಾರ' ಅನುಭವವನ್ನು ಮಿಸ್ ಮಾಡ್ಕೊಬೇಡಿ: ದೇವಸೇನ ಅನುಷ್ಕಾ ಶೆಟ್ಟಿ
ತನಿಖೆ ಆರಂಭವಾಗಿದೆ. ಮೃತರ ಮೊಬೈಲ್ ಫೋನ್ ಅನ್ನು ಪ್ರಾಥಮಿಕವಾಗಿ ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಫೋನ್ ಮತ್ತು ಸೂಸೈಡ್ ನೋಟ್‌ನಲ್ಲಿ ಬರೆದಿರುವ ಅಂಶಗಳನ್ನು ಆಧರಿಸಿ ತನಿಖೆ ನಡೆಸಿ ಸಾವಿನ ಕಾರಣವನ್ನು ಬಹಿರಂಗಪಡಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.