ನಾಗಶೇಖರ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ. ಕೆಲ ದಿನಗಳ ಹಿಂದಷ್ಟೇ ಸೂಪರ್ ಹಿಟ್ ಸಿನಿಮಾ 'ಸಂಜು ವೆಡ್ಸ್ ಗೀತಾ'ದ ಸೀಕ್ವೆಲ್ ಕೆಲಸವನ್ನು ಶುರು ಮಾಡಿದ್ದರು. ಇದರ ಬೆನ್ನಲ್ಲೇ ನಾಗಶೇಖರ್ ಮತ್ತೊಂದು ಬಿಗ್ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ರೆವಲ್ಯೂಷನರಿ ಸಬ್ಜೆಕ್ಟ್ ಇಟ್ಟುಕೊಂಡು ನೈಜ ಘಟನೆಯನ್ನು ತೆರೆ ಮೇಲೆ ತೋರಿಸಲು ಹೊರಟಿದ್ದಾರೆ. ಅದಕ್ಕೆ ಕೊಟ್ಟಿರುವ ಹೆಸರು 'ಭೀಮಾ ಕೋರೇಗಾಂವ'.
ನಾಗಶೇಖರ್ ಮೂವೀಸ್ ಹಾಗೂ ಪವಿತ್ರಾ ಇಂಟರ್ ನ್ಯಾಷನಲ್ ಮೂವೀ ಮೇಕರ್ಸ್ ಅಡಿ ಛಲವಾದಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಹು ಸೂಕ್ಷ್ಮ ವಿಚಾರ ಇಟ್ಟುಕೊಂಡು ಮಾಡುತ್ತಿರುವ ಚಲನಚಿತ್ರ ಇದಾಗಿದ್ದು, ಇತ್ತೀಚೆಗೆ ಈ ಸಿನಿಮಾದ ಶೀರ್ಷಿಕೆಯನ್ನು ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಗಳು ಬಿಡುಗಡೆ ಮಾಡಿದರು.
ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಪೂನಾ ನದಿ ದಡದಲ್ಲಿ ಅಂದು ಸ್ವಾಭಿಮಾನಿ ಬದುಕಿಗೋಸ್ಕರ ಘನಘೋರ ಯುದ್ಧ ನಡೆದಿತ್ತು. 2ನೇ ಬಾಜೀರಾಯನ ಘೋರ ಕೃತ್ಯಗಳನ್ನು ವಿರೋಧಿಸಿ ಮೆಹರ್ ಸೈನಿಕರು ನಡೆಸಿದ ಯುದ್ಧ. ಭಾರತದ ನೆಲದಲ್ಲಿ ಬಾಜೀರಾಯ ಅಸ್ಪೃಶ್ಯರನ್ನು ಹೇಗೆ ನಡೆಸಿಕೊಂಡಿದ್ದ, ಯಾವ ಉದ್ದೇಶಕ್ಕೆ ಈ ಯುದ್ಧ ನಡೆಯಿತು ಅನ್ನೋದನ್ನು ಈ ಸಿನಿಮಾದಲ್ಲಿ ದಾಖಲು ಮಾಡಲಾಗುತ್ತದೆ ಎಂದರು.
ನಿರ್ದೇಶಕ ನಾಗಶೇಖರ್ ಮಾತನಾಡಿ, ಇದು 1818ರ ಸಂದರ್ಭದ ರೆವಲ್ಯೂಷನರಿ ಸಬ್ಜೆಕ್ಟ್. ಶೋಷಿತರ ಬದುಕಿಗೆ ಬೆಳಕು ಹಚ್ಚುವ ಕೆಲಸಕ್ಕೆ ಇಂದು ದೀಪ ಹಚ್ಚುವ ಮೂಲಕ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ಈ ಸಿನಿಮಾ ಮಾಡುವಂತೆ ನನಗೆ ಪ್ರೇರೇಪಿಸಿದ್ದು, ಬರಹಗಾರ ಚಂದ್ರಚೂಡ್. ಚಿತ್ರದ ಬಜೆಟ್ 120 ಕೋಟಿ ಆಗಬಹುದು. ನಿರ್ಮಾಪಕ ಕುಮಾರ್ ಎಷ್ಟೇ ಆದರೂ ಖರ್ಚು ಮಾಡಲು ರೆಡಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ಓರ್ವರು ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರನ್ನು ನಾಯಕಿ ಪಾತ್ರಕ್ಕೆ ಕರೆತರುವ ಉದ್ದೇಶವಿದೆ. 54 ಕೋಟಿ ಶೋಷಿತರಿಗೆ ಬೆಳಕಾಗುವ ಕಥಾನಕವಿದು. ಚಂದ್ರಚೂಡ್ ನೇತೃತ್ವದಲ್ಲಿ ಬರಹಗಾರರ ತಂಡ ಕಟ್ಟಿ ಭಾಗ-1, ಭಾಗ-2 ಚಿತ್ರ ಮಾಡುವ ಯೋಚನೆಯಿದೆ. ಪ್ರೀ ಪ್ರೊಡಕ್ಷನ್ಗೆ 365 ದಿನ ತೆಗೆದುಕೊಂಡಿದ್ದೇನೆ. ಈ ಕಥೆಯನ್ನು ಕಣ್ಣಿಗೆ ಕಟ್ಟುವ ಹಾಗೆ, ಮನಸ್ಸಿಗೆ ಮುಟ್ಟುವ ಹಾಗೆ ಕಟ್ಟಿಕೊಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಇದನ್ನೂ ಓದಿ: ಭೂಗತ ಜಗತ್ತಿನ ಬೆದರಿಕೆ ಎದುರಿಸಿ ಮುನ್ನಡೆದ ಏಕೈಕ ನಟ ಶಾರುಖ್ ಖಾನ್: ನಿರ್ದೇಶಕ ಸಂಜಯ್ ಗುಪ್ತಾ!
ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ, ಸಂಜು ವೆಡ್ಸ್ ಗೀತಾ ಚಿತ್ರದ ಬಗ್ಗೆ ಚರ್ಚೆ ನಡೆಸುವಾಗ ಈ ವಿಷಯ ಪ್ರಸ್ತಾಪಕ್ಕೆ ಬಂತು. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರನ ಭಸ್ಮಾರತಿಯಲ್ಲಿ ಭಾಗಿಯಾದ ಅಕ್ಷಯ್ ಕುಮಾರ್, ಶಿಖರ್ ಧವನ್
ಮುಖ್ಯ ಅತಿಥಿಯಾಗಿದ್ದ ಚಿಂತಕ ಗೋಪಾಲ್ ಮಾತನಾಡಿ, ಅಸಮಾನತೆಯ ವಿರುದ್ಧ ನಡೆದ ಹೋರಾಟವಿದು. 500 ಜನ ಸೈನಿಕರು, 30 ಸಾವಿರ ಪೇಶ್ವೆ ಬಾಜೀರಾಯನ ಸೈನಿಕರನ್ನು 12 ಗಂಟೆಗಳಲ್ಲಿ ಧ್ವಂಸ ಮಾಡಿದ ಘಟನೆ. ಮೆಹರ್ಸ್ ಅಂದರೆ ಗುಲಾಮರು. ಬಾಜೀರಾಯ ಅಸ್ಪೃಶ್ಯರ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದ. ಇದನ್ನು ವಿರೋಧಿಸಿ ನಡೆದ ಯುದ್ಧವಿದು. ಹಾಲಿವುಡ್ ಶೈಲಿಯ ಸಿನಿಮಾ ಆಗಲಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ನೆಹರು ಓಲೇಕಾರ್, ಚಕ್ರವರ್ತಿ ಚಂದ್ರಚೂಡ್ ಉಪಸ್ಥಿತರಿದ್ದರು..