ಈ ವರ್ಷ ತೆರೆಕಂಡ ಪೌರಾಣಿಕ ಕಥೆಯಾಧಾರಿತ ಸಿನಿಮಾ 'ಆದಿಪುರುಷ್'. ಭಗವಾನ್ ಶ್ರೀರಾಮನ ಪಾತ್ರದಲ್ಲಿ ಸೌತ್ ಸೂಪರ್ಸ್ಟಾರ್ ಪ್ರಭಾಸ್ ಮತ್ತು ಸೀತೆಯ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಿರಲಿಲ್ಲ. ಸಾಕಷ್ಟು ಟೀಕೆಗಳನ್ನು ಎದುರಿಸಿ ಪ್ರೇಕ್ಷಕರಿಂದ ನಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವೀಕರಿಸಿತ್ತು. ಇದೀಗ ಮತ್ತೊಮ್ಮೆ ಆದಿಪುರುಷ್ ಟ್ರೋಲ್ ಆಗಿದೆ. ಒಂದೆಡೆ ಚಂದ್ರಯಾನ 3 ಯಶಸ್ಸಿಗೆ ಅಭಿನಂದನೆ ಜೊತೆಗೆ ಶುಭಾಶಯ ಹರಿದುಬರುತ್ತಿದ್ದರೆ, ಆದಿಪುರುಷ್ ಚಿತ್ರದ ಕುರಿತು ನೆಗೆಟಿವ್ ಕಮೆಂಟ್ಗಳು ಈಗಲೂ ವ್ಯಕ್ತವಾಗುತ್ತಿವೆ.

ಹೌದು, ಆಗಸ್ಟ್ 23 ಕೋಟ್ಯಂತರ ಭಾರತೀಯರ ಕನಸು ನನಸಾದ ಅದ್ಭುತ ದಿನ. ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತದ ಚಂದ್ರಯಾನ 3 ಗಗನ ನೌಕೆಯು ಯಶಸ್ವಿಯಾಗಿ ಲ್ಯಾಂಡ್ ಆಗಿ ಐತಿಹಾಸ ಸೃಷ್ಟಿಸಿದ ಅಮೋಘ ಕ್ಷಣ. ಈ ವಿಶೇಷ ದಾಖಲೆ ಮಾಡಿದ ಭಾರತಕ್ಕೆ ವಿಶ್ವದ ನಾನಾ ಕಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ ಕಡಿಮೆ ವೆಚ್ಚದಲ್ಲಿ ತಯಾರಾದ ಚಂದ್ರಯಾನ 3ಯನ್ನು ಇಟ್ಟುಕೊಂಡು 'ಆದಿಪುರುಷ್' ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತಿದೆ.

ಆದಿಪುರುಷ್ನ ಬಜೆಟ್ಗಿಂತ ಚಂದ್ರಯಾನ 3 ಬಜೆಟ್ ಕಡಿಮೆಯಿತ್ತು. ಆದರೂ ಚಂದ್ರಯಾನ 3 ಯಶಸ್ವಿಯಾಗಿದೆ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಆದಿಪುರುಷ್ ಅನ್ನು ಟೀಕಿಸುತ್ತಿದ್ದಾರೆ. ಸುಮಾರು 700 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಆದಿಪುರುಷ್ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಚಿತ್ರವು ಸಂಪೂರ್ಣ ಕಳಪೆ ಪ್ರದರ್ಶನ ಕಂಡಿತು. ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಆದರೆ ಚಂದ್ರಯಾನ 3 ಕೇವಲ 615 ಕೋಟಿ ರೂಪಾಯಿಯಲ್ಲಿ ತಯಾರಾಗಿ ಇತಿಹಾಸ ಬರೆಯಿತು ಎಂದು ಚಂದ್ರಯಾನ 3 ಯಶಸ್ಸನ್ನು ಆಚರಿಸುವುದರೊಂದಿಗೆ ಆದಿಪುರುಷ್ ಅನ್ನು ಟೀಕಿಸಲಾಗುತ್ತಿದೆ.

ಇದನ್ನೂ ಓದಿ: 1.75 ಕೋಟಿ ರೂ. ಕಲೆಕ್ಷನ್: ಅತಿ ಕಡಿಮೆ ಸಂಪಾದನೆ ಮಾಡಿದ 'ಆದಿಪುರುಷ್'!
ಆದಿಪುರುಷ್ ಸಿನಿಮಾ ಈವರೆಗೆ ತಯಾರಾದ ಅತ್ಯಂತ ದುಬಾರಿ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಓಂ ರಾವುತ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಗ್ರಾಫಿಕ್ಸ್, ಡೈಲಾಗ್ಸ್, ಕಥೆ ರವಾನಿಸಿದ ರೀತಿ, ಪಾತ್ರಗಳ ಚಿತ್ರಣ ಸೇರಿದಂತೆ ಕೆಲ ವಿಷಯಗಳ ಹಿನ್ನೆಲೆಯಲ್ಲಿ ಪ್ರೇಕ್ಷಕರು, ವಿಮರ್ಷಕರಿಂದ ನಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿತು. ಹನುಮಾನ್ ಡೈಲಾಗ್ಗಳು ಹೆಚ್ಚಿನ ಟೀಕೆಗೆ ಒಳಗಾಗಿದ್ದವು.

ಮಹಾಕಾವ್ಯ ರಾಮಾಯಣ ಆಧಾರಿತ ಸಿನಿಮಾ ಇದಾಗಿದ್ದು, ಕೆಲ ಡೈಲಾಗ್ಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ವಿರುದ್ಧ ಪ್ರೇಕ್ಷಕರು ಕಿಡಿಕಾರಿದ್ದರು. ಬಳಿಕ ಡೈಲಾಗ್ ರೈಟರ್ ಜನತೆಯಲ್ಲಿ ಕ್ಷಮೆಯಾಚಿಸಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ನಿರ್ದೇಶಕರು ನಟಿಗೆ ಚುಂಬಿಸಿದ್ದ ವಿಚಾರವೂ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಮೊದಲೆರಡು ದಿನ ಅದ್ಭುತ ಪ್ರದರ್ಶನ ಕಂಡ ಸಿನಿಮಾ, ನೆಗೆಟಿವ್ ಟಾಕ್ ಸ್ಪ್ರೆಡ್ ಆದ ಬೆನ್ನಲ್ಲೇ ಬಾಕ್ಸ್ ಆಫೀಸ್ನಲ್ಲಿ ಕುಸಿತ ಕಂಡಿತ್ತು.

ಇದನ್ನೂ ಓದಿ: 'ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ': ಆದಿಪುರುಷ್ ಡೈಲಾಗ್ ರೈಟರ್