ತ್ರಿಬಲ್ ರೈಡಿಂಗ್....ಟ್ರೈಲರ್, ಶೀರ್ಷಿಕೆ, ಹಾಡಿನಿಂದಲೇ ಸ್ಯಾಂಡಲ್ವುಡ್ನಲ್ಲಿ ಸಖತ್ ಟಾಕ್ ಆಗುತ್ತಿರುವ ಚಿತ್ರ. ಗೋಲ್ಡ್ನ್ ಸ್ಟಾರ್ ಗಣೇಶ್ ಸಿನಿಮಾ ಅಂದಮೇಲೆ ನಿರೀಕ್ಷೆ ಹೆಚ್ಚೇ ಅಲ್ವಾ?. ಮೂವರು ಸುಂದರಿಯರ ಜತೆ ಗಣೇಶ್ ನವೆಂಬರ್ 25ರಂದು ರಾಜ್ಯಾದ್ಯಂತ ತ್ರಿಬಲ್ ರೈಡಿಂಗ್ ಹೋಗಲು ಸಜ್ಜಾಗಿದ್ದಾರೆ.
ಯಟ್ಟ...ಯಟ್ಟ ಎನ್ನುವ ಹಾಡಿನಿಂದ ನಿನಿಪ್ರಿಯರ ಮನ ಸೆಳೆದಿರುವ 'ತ್ರಿಬಲ್ ರೈಡಿಂಗ್' ಪ್ರೀ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಟ ಗಣೇಶ್, ನಟಿಯರಾದ ಅದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ, ರವಿಶಂಕರ್ ಗೌಡ, ನಿರ್ದೇಶಕ ಮಹೇಶ್ ಗೌಡ, ಕ್ಯಾಮರಾಮ್ಯಾನ್ ಜೈ ಆನಂದ್ ಸೇರಿದಂತೆ ಚಿತ್ರತಂಡದ ಉಪಸ್ಥಿತಿ ಇತ್ತು.
ತ್ರಿಬಲ್ ರೈಡಿಂಗ್ ಚಿತ್ರತಂಡದ ಮಾತು: ಮೊದಲು ನಾಯಕಿಯರಾದ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ಮಾತನಾಡಿ, ಒಂದೊಳ್ಳೆ ಸಿನಿಮಾದಲ್ಲಿ ಅಭಿನಯಿಸಿರುವ ಸಂತೋಷ ನಮಗಿದೆ ಎಂದರು. ಬಳಿಕ ಸಾಧು ಕೋಕಿಲ ಮಾತನಾಡಿ, ಡಾ. ರಾಜ್ಕುಮಾರ್ ಸೇರಿದಂತೆ ಪ್ರಖ್ಯಾತ ನಿರ್ದೇಶಕರು ಕಥೆ ಮಾಡಿದ ಜಾಗದಲ್ಲಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿದೆ, ಇಲ್ಲಿ ಪಾಸಿಟಿವ್ ಎನರ್ಜಿ ಇದೆ, ಈ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ತಿಳಿಸಿದರು. ರಚನಾ ಇಂದರ್ ತಂದೆ ಪಾತ್ರ ಮಾಡಿರುವ ರಂಗಾಯಣ ರಘು ಅವರು ಗಣೇಶ್ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಗಣೇಶ್ ಚಿತ್ರಗಳಲ್ಲಿ ಅಭಿನಯಿಸೋದು ದೊಡ್ಡ ವಿಷಯ. ಈ ಚಿತ್ರ ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತ್ರಿಬಲ್ ರೈಡಿಂಗ್ ಯಾವಾಗ?: ನಿರ್ದೇಶಕ ಮಹೇಶ್ ಗೌಡ ಮಾತನಾಡಿ, ಈ ಚಿತ್ರದ ಕಥೆ ಒಪ್ಪಿ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ರಾಮ್ ಗೋಪಾಲ್, ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಇದೇ ಇಪ್ಪತ್ತೈದರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.
ಇದು ನನ್ನ ಮೊದಲ ನಿರ್ಮಾಣದ ಚಿತ್ರ. ಕೋವಿಡ್ ಸಮಯದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಆ ದಿನದಿಂದ ಹಿಡಿದು ಇಲ್ಲಿಯವರೆಗೂ ನಮ್ಮ ಇಡೀ ತಂಡ ನೀಡಿರುವ ಸಹಕಾರಕ್ಕೆ ನಾನು ಆಬಾರಿ. ನಮ್ಮ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಿರ್ಮಾಪಕ ರಾಮ್ ಗೋಪಾಲ್ ವೈ.ಎಂ.
ಇದನ್ನೂ ಓದಿ: ಅರ್ಧ ಕೋಟಿ ವೆಚ್ಚದಲ್ಲಿ ತಯಾರಾದ ಯಟ್ಟ ಯಟ್ಟ ಸಾಂಗ್.. ಮೇಕಿಂಗ್ ವಿಡಿಯೋ ರಿಲೀಸ್
ಕೊನೆಯದಾಗಿ ಮಾತನಾಡಿದ ನಟ ಗಣೇಶ್, ನಾನು ಈ ರೀತಿಯ ಪಾತ್ರವನ್ನು ಇದುವರೆಗೂ ಮಾಡಿಲ್ಲ. ಚಿತ್ರದಲ್ಲಿ ಬರುವ ಟ್ವಿಸ್ಟ್ಗಳು ಪ್ರೇಕ್ಷಕರಿಗೆ ಹಿಡಿಸಲಿದೆ. ಕ್ಲೈಮ್ಯಾಕ್ಸ್ ಅಂತೂ ಅದ್ಭುತ. ಈಗಾಗಲೇ ಚಿತ್ರ ನೋಡಿರುವ ಗೆಳೆಯರು ನನಗೆ ಫೋನ್ ಮಾಡಿ ನೀವು ಹಿಂದಿನ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಚೆನ್ನಾಗಿ ಕಾಣುತ್ತಿದ್ದೀರಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಕ್ರೆಡಿಟ್ ಛಾಯಾಗ್ರಾಹಕ ಜೈ ಆನಂದ್ ಅವರಿಗೆ ಸಲ್ಲಬೇಕು. ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಅಮೋಘವಾಗಿ ನಟಿಸಿದ್ದಾರೆ. ಚಿತ್ರ ನಿರ್ದೇಶಿಸಿರುವ ಮಹೇಶ್ ಗೌಡ ಹಾಗೂ ನಿರ್ಮಿಸಿರುವ ರಾಮ್ ಗೋಪಾಲ್ ಅವರಿಗೆ ಧನ್ಯವಾದ ಎಂದರು.
ಈಗಾಗಲೇ ಜನಪ್ರಿಯವಾಗಿರುವ ಚಿತ್ರದ ಯಟ್ಟ ಯಟ್ಟ ಹಾಡಿಗೆ ಇಡೀ ತಂಡ ಹೆಜ್ಜೆ ಹಾಕುವುದರ ಮೂಲಕ ಸಮಾರಂಭದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.
ಇದನ್ನೂ ಓದಿ: ಸ್ಟೆತೋಸ್ಕೋಪ್ ಹಿಡಿದ ಗೋಲ್ಡನ್ ಸ್ಟಾರ್.. ಇದು ಗಣಿಯ ಸಕ್ಸಸ್ ಕಹಾನಿಯ ಸೀಕ್ರೆಟ್