ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಸಖತ್ ಸುದ್ದಿ ಮಾಡುತ್ತಿರುವ ಹಾಗೂ ನವರಸನಾಯಕ ಜಗ್ಗೇಶ್ ಅಭಿನಯದ ಹಾಗೂ ನೀರ್ದೋಸೆ ಸಿನಿಮಾ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ ತೋತಾಪುರಿ ಬಿಡುಗಡೆಗೆ ಸಿದ್ಧಗೊಂಡಿದೆ. ಆರಂಭದಿಂದಲೂ ಇಲ್ಲಿಯವರೆಗೆ ಒಂದಲ್ಲ ಒಂದು ವಿಚಾರಕ್ಕೆ ಈ ಚಿತ್ರ ಸದ್ದು ಮಾಡುತ್ತಲೇ ಇದೆ. ಸದ್ಯ ಟ್ರೈಲರ್ನಿಂದಲೇ ಸಖತ್ ಸದ್ದು ಮಾಡುತ್ತಿರುವ ಚಿತ್ರ ಇದೀಗ ಬಿಡುಗಡೆಗೆ ತುದಿಗಾಲಮೇಲೆ ನಿಂತಿದೆ. ಕಾರ್ಯಕ್ರಮವೊಂದಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಇಂದು ಘೋಷಿಸಲಾಯಿತು.
ಈ ಬಗ್ಗೆ ಮಾತನಾಡುವುದಕ್ಕೆ ನಟರಾದ ಜಗ್ಗೇಶ್, ಧನಂಜಯ್, ನಟಿಯರಾದ ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರಮ್, ಹೇಮದತ್ ನಿರ್ದೇಶಕ ವಿಜಯ ಪ್ರಸಾದ್, ನಿರ್ಮಾಪಕ ಕೆ ಸುರೇಶ್ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತಿ ಇತ್ತು. ಸದ್ಯಕ್ಕೆ ಹಾಡುಗಳು ಮತ್ತು ಟ್ರೈಲರ್ನಿಂದಲೇ ಗಮನ ಸೆಳೆಯುತ್ತಿರುವ ತೋತಾಪುರಿ ಸಿನಿಮಾ ಸೆಪ್ಟೆಂಬರ್ 30ಕ್ಕೆ ವಿಶ್ವದಾದ್ಯಂತ ತೆರೆ ಕಾಣುತ್ತಿದೆ.
ಚಿತ್ರದಲ್ಲಿ ಶಕೀಲಾ ಬಾನು ಪಾತ್ರ ಮಾಡುತ್ತಿರುವ ಅದಿತಿ ಪ್ರಭುದೇವ ಮಾತನಾಡಿ, ಟ್ರೈಲರ್ ನೋಡಿದವರು ಹೆಚ್ಚಾಗಿ ಚೇಷ್ಟೇ ಇದೆ ಅಂತಾರೆ. ಆದರೆ, ತೋತಾಪುರಿ ಸಿನಿಮಾದ ಕಥೆನೇ ಬೇರೆ ಇದೆ. ಜೀವನದ ಮೌಲ್ಯಗಳನ್ನು ಒಳಗೊಂಡಿರುವ ಚಿತ್ರ ಇದಾಗಿದೆ ಅಂದರು.
ನಿರ್ದೇಶಕ ವಿಜಯ ಪ್ರಸಾದ್ ಜೊತೆ ಸಿದ್ಲಿಂಗು, ನೀರ್ದೋಸೆ, ಪೆಟ್ರೋಮ್ಯಾಕ್ಸ್ ಸಿನಿಮಾಗಳನ್ನು ಮಾಡಿರುವ ಖಾಯಂ ನಟಿ ಅಂದ್ರೆ ಅದು ಬಹುಭಾಷೆ ನಟಿ ಸುಮನಾ ರಂಗನಾಥ್. ಈ ಚಿತ್ರದಲ್ಲಿ ಸಿಸ್ಟರ್ ವಿಕ್ಟೋರಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾ ಮಾಡೋದಿಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಅವರ ಕಲ್ಪನೆ ಕಾರಣ. ಒಂದು ಪಾತ್ರಕ್ಕೆ ಯಾವ ಕಲಾವಿದರನ್ನು ಹಾಕಿದ್ರೆ ಆ ಪಾತ್ರ ಚೆನ್ನಾಗಿ ಮೂಡಿ ಬರುತ್ತೆ ಅಂತಾ ಅವ್ರಿಗೆ ಚೆನ್ನಾಗಿ ಗೊತ್ತು ಅಂತಾ ಸುಮನಾ ರಂಗನಾಥ್ ಡೈರೆಕ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತೋತಾಪುರಿ ಸಿನಿಮಾದಲ್ಲಿ ಒಂದು ಟರ್ನಿಂಗ್ ಪಾಯಿಟ್ ಪಡೆಯುವ ಪಾತ್ರವನ್ನು ನಟ ಧನಂಜಯ್ ಮಾಡಿದ್ದು, ನಾರಾಯಣ್ ಪಿಳ್ಳೈ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಂ ಒಂಥರಾ ಪೊಲೀ ಟೀಂ. ತೋತಾಪುರಿ ಸಿನಿಮಾದ ಜೊತೆಗೆ ಒಳ್ಳೆ ನೆನಪುಗಳನ್ನು ಕಟ್ಟಿಕೊಟ್ಟಿದೆ ಎಂದರು. ಇದರ ಜೊತೆಗೆ ವೀಣಾ ಸುಂದರ್, ಹೇಮದತ್ ಈ ಸಿನಿಮಾದ ಅನುಭವಗಳನ್ನು ಹಂಚಿಕೊಂಡರು.
ಈ ಚಿತ್ರದಲ್ಲಿ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿರುವ ನವರಸ ನಾಯಕ ಜಗ್ಗೇಶ್ ಮಾತನಾಡಿ, ಈ ಸಿನಿಮಾ ಮಾಡೋದಿಕ್ಕೆ ಮೊದಲಿಗೆ ನಿರ್ಮಾಪಕ ಕೆ ಸುರೇಶ್ಗೆ ಇರುವ ತಾಳ್ಮೆ ಮುಖ್ಯ ಕಾರಣ. ಯಾಕೆಂದರೆ ದೊಡ್ಡ ತಾರ ಬಳಗ, ಜೊತೆಗೆ ಎರಡು ವರ್ಷ ಕೊರೊನಾ ಎಂಬ ಹೆಮ್ಮಾರಿಯಿಂದ ತಪ್ಪಿಸಿಕೊಂಡು ಈ ಸಿನಿಮಾ ಮಾಡಲಾಗಿದೆ. ನಿರ್ಮಾಪಕರ ತಾಳ್ಮೆ ಮೆಚ್ಚಬೇಕು. ಇದು ಸಿನಿಮಾ ಅಲ್ಲ, ಕಾದಂಬರಿ ಸಿನಿಮಾ ಎಂದು ಹೇಳಿದರು.
ಗೋವಿಂದಾಯ ನಮಃ ಹಾಗೂ ಶಿವಲಿಂಗ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ.ಎ ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ತೋತಾಪುರಿ ಪಾರ್ಟ್ 1 ಸಿನಿಮಾ ಸೆಪ್ಟೆಂಬರ್ 30ಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಚಿತ್ರನಗರಿ ಅಭಿವೃದ್ಧಿಗಾಗಿ ಸಂಸದ ಪ್ರತಾಪ್ ಸಿಂಹಗೆ ನಟ ವಸಿಷ್ಠ ಸಿಂಹ ಮನವಿ