ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಇತ್ತೀಚಿನ ದಿನಗಳಲ್ಲಿ ಈ ತರಕಾರಿಗೆ ಭಾರಿ ಬೇಡಿಕೆ ಬಂದಿದ್ದು, ಮಾರುಕಟ್ಟೆಗೆ ಆವಕ ಕಡಿಮೆ ಆಗಿದೆ. ಇದು ಬೆಲೆ ಹೆಚ್ಚಾಗಲು ಪ್ರಮುಖ ಕಾರಣ. ಸಾಮಾನ್ಯ ಜನರೇಕೆ? ಶ್ರೀಮಂತರೂ ಸಹ ತಮ್ಮ ತರಕಾರಿ ಬುಟ್ಟಿಯಲ್ಲಿ ಟೊಮೆಟೊ ಪ್ರಮಾಣ ತಗ್ಗಿಸಲು ನಿರ್ಧರಿಸಿದ್ದಾರೆ. ಬಾಲಿವುಡ್ನ ಹಿರಿಯ ನಟ ಸುನೀಲ್ ಶೆಟ್ಟಿ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ.
ಸುನೀಲ್ ಶೆಟ್ಟಿ ಮೇಲೂ ಬೆಲೆ ಏರಿಕೆ ಪ್ರಭಾವ: ಹಲವು ಐಷಾರಾಮಿ ಕಾರುಗಳ ಒಡೆಯ, ಬಹುಕೋಟಿ ಮೌಲ್ಯದ ಬಂಗಲೆಗಳ ಮಾಲೀಕ, ರೆಸ್ಟೋರೆಂಟ್‌ಗಳ ವಾರಸುದಾರ, ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಕೂಡ ಏರುತ್ತಿರುವ ಟೊಮೆಟೊ ಬೆಲೆಯ ಮುಂದೆ ಬಡವರಾಗಿದ್ದಾರಂತೆ. ಟೊಮೊಟೊ ದರ ಬಹಳ ಹೆಚ್ಚಿದ್ದು, ತಮ್ಮ ಆಹಾರದಲ್ಲಿ ಟೊಮೆಟೊ ಪ್ರಮಾಣ ಕಡಿಮೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
'ಟೊಮೆಟೊ ತಿನ್ನುವುದು ಕಡಿಮೆಯಾಗಿದೆ': ಹೆಚ್ಚುತ್ತಿರುವ ಟೊಮೆಟೊ ಬೆಲೆಯ ಬಗ್ಗೆ ಸುನೀಲ್ ಶೆಟ್ಟಿ ಮಾತನಾಡಿ, "ನನ್ನ ಹೆಂಡತಿ ಮನ ಶೆಟ್ಟಿ ಒಂದೋ ಎರಡೋ ದಿನಕ್ಕೆ ತರಕಾರಿ ಖರೀದಿಸುತ್ತಾರೆ. ತಾಜಾ ಪದಾರ್ಥಗಳನ್ನು ತಿನ್ನಲು ನಾವು ಪ್ರಾಮುಖ್ಯತೆ ನೀಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಟೊಮೆಟೊ ದುಬಾರಿ ಆಗುತ್ತಿದೆ. ಇದು ನಮ್ಮ ಅಡುಗೆಮನೆಯ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ಈಗಿನ ದಿನಗಳಲ್ಲಿ ನಾವು ಟೊಮೆಟೊ ತಿನ್ನುವುದು ಕಡಿಮೆ ಆಗಿದೆ. ನಾನು ನಟ, ಹಾಗಾಗಿ ಬೆಲೆ ಏರಿಕೆ ನಮ್ಮ ಮೇಲೆ ಪರಿಣಾಮ ಬೀರಲ್ಲ ಎಂದು ಜನರು ಭಾವಿಸುತ್ತಾರೆ. ಆದ್ರೆ ಸತ್ಯಾಂಶ ಅಂದ್ರೆ ಬೆಲೆ ಏರಿಕೆ ನನ್ನ ಮೇಲೆಯೂ ಪರಿಣಾಮ ಬೀರುತ್ತದೆ. ನಾವೂ ಸಹ ಅಂತಹ ಸಂಗತಿಗಳಿಂದ ಬಳಲುತ್ತಿದ್ದೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಾರುಖ್ ನಟನೆಯ 'ಜವಾನ್' ವಿಡಿಯೋ ಮೊದಲು ನೋಡಿದ್ದೇ ಸಲ್ಮಾನ್ ಖಾನ್
'ಆನ್‌ಲೈನ್‌ನಲ್ಲಿ ಟೊಮೆಟೊ ಆರ್ಡರ್ ಮಾಡುತ್ತೇನೆ': ರೆಸ್ಟೋರೆಂಟ್ ನಡೆಸುತ್ತಿರುವ ಶ್ರೀಮಂತ ನಟ ಸುನೀಲ್ ಶೆಟ್ಟಿ, ತರಕಾರಿ ದರ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ. ವರದಿಗಳ ಪ್ರಕಾರ, ಇವರ ಪುತ್ರಿ ಅಥಿಯಾ ಶೆಟ್ಟಿ ಅವರಿಗೆ 50 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿರುವ ಶೆಟ್ಟಿ, ನಾನು ಆನ್‌ಲೈನ್‌ನಲ್ಲಿ ಟೊಮೆಟೊ ಆರ್ಡರ್ ಮಾಡುತ್ತೇನೆ. ಅಲ್ಲಿ ಅಗ್ಗವಾಗಿರುತ್ತದೆ ಎಂಬ ಕಾರಣದಿಂದಲ್ಲ, ಆದರೆ ಆನ್‌ಲೈನ್‌ನಲ್ಲಿ ತಾಜಾ ಉತ್ಪನ್ನಗಳನ್ನು ಪೂರೈಸುತ್ತಾರೆ. ಆನ್‌ಲೈನ್‌ನಲ್ಲಿ ವೇದಿಕೆಯಲ್ಲಿ, ರೈತರಿಗೆ ನೇರ ಲಾಭವನ್ನು ನೀಡಲಾಗುತ್ತದೆ. ನಮ್ಮಂತ ಗ್ರಾಹಕರಿಗೆ ಉತ್ತಮ ಸರಕುಗಳನ್ನು ಪೂರೈಸುತ್ತಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸುದೀಪ್, ರಜನಿಕಾಂತ್ To ಶಾರುಖ್: ತೆರೆ ಮೇಲೆ ಬಾಂಡ್ಲಿಯಾಗಿ ಕಾಣಿಸಿಕೊಂಡ ನಟರಿವರು!
ಜನವರಿ 23ರಂದು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ದಾಂಪತ್ಯ ಜೀವನ ಆರಂಭಿಸಿದ್ದರು. ಸುನೀಲ್ ಶೆಟ್ಟಿ ಫಾರ್ಮ್‌ಹೌಸ್‌ನಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆದಿತ್ತು. ಸುನೀಲ್ ಶೆಟ್ಟಿ ತಮ್ಮ ಪುತ್ರಿಗೆ ಬಹುಕೋಟಿ ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿತ್ತು.