ಅಭಿಮಾನಿ ದೇವರುಗಳ ಪ್ರೀತಿಯ ಅಪ್ಪು ಉತ್ತರಾಧಿಕಾರಿಯಾಗಿ ದರ್ಬಾರ್ ಮಾಡೋಕೆ ರಾಘಣ್ಣ ಅವರ ಕಿರಿಯ ಪುತ್ರ ಯುವ ರಾಜ್‍ಕುಮಾರ್ ಸಜ್ಜಾಗಿದ್ದಾರೆ. ಈಗಾಗಲೇ ಹೊಂಬಾಳೆಯಲ್ಲಿ ಯುವ ಮೊದಲ ಸಿನಿಮಾ ಅನೌನ್ಸ್ ಆಗಿದೆ. ಅದ್ರೆ ಯಾವಾಗ ಚಿತ್ರದ ಶೂಟಿಂಗ್ ಶುರುವಾಗುತ್ತೆ, ಚಿತ್ರಕ್ಕೆ ಯಾವ ಟೈಟಲ್ ಫಿಕ್ಸ್ ಮಾಡುತ್ತಾರೆ ಅನ್ನೋ ಕುತೂಹಲ ದೊಡ್ಮನೆ ಅಭಿಮಾನಿಗಳಲ್ಲಿತ್ತು. ಈಗ ಆ ಕುತೂಹಲತಕ್ಕೆ ಉತ್ತರ ಸಿಕ್ಕಿದೆ.
ಹೌದು, ಭಗವಂತ ಒಂದು ಕಿತ್ಕೊಂಡ್ರೆ ಮತ್ತೊಂದು ಕೊಟ್ಟೆ ಕೊಡುತ್ತಾನೆ ಅನ್ನೋ ನಂಬಿಕೆ ನಮ್ಮಲ್ಲಿದೆ. ಅದೇ ರೀತಿ ಅಭಿಮಾನಿ ದೇವರುಗಳಿಂದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಕಿತ್ಕೊಂಡ ವಿಧಿ ಈಗ ಅಪ್ಪು ಅಭಿಮಾನಿಗಳಿಗೆ ಯುವನನ್ನು ಕೊಟ್ಟಿದ್ದಾನೆ ಅಂದರೇ ತಪ್ಪಾಗಲ್ಲ. ಯಾಕೆಂದರೆ ಅಪ್ಪು ಅಗಲಿಕೆ ನಂತರ ಅಪ್ಪುಗೆ ಕೊಟ್ಟಿದ್ದ ಪ್ರೀತಿಯನ್ನು ಯುವನಿಗೆ ಉಣ ಬಡಿಸಲು ದೊಡ್ಮನೆ ದೇವರುಗಳು ಸಜ್ಜಾಗಿದ್ದಾರೆ. ಜೊತೆಗೆ ಅಪ್ಪುಗಾಗಿ ಸಿದ್ಧವಾಗಿದ್ದ ಸ್ಕ್ರಿಪ್ಟ್ ನಲ್ಲಿ ಯುವ ರಾಜ್ ಕುಮಾರ್ ಮೊದಲ ಸಿನಿಮಾ ತಯಾರಾಗಲಿದ್ದು, ಈ ಚಿತ್ರವನ್ನು ಅಪ್ಪುಗಾಗಿ ಕನಸು ಕಂಡಿದ್ದ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹೊಂಬಾಳೆ ಫಿಲಂಸ್ ಯುವ ಮೊದಲ ಸಿನಿಮಾವನ್ನು ನಿರ್ಮಾಣ ಮಾಡಲಿದೆ.
ದೊಡ್ಮನೆ ದೇವರುಗಳು ಕುಣಿದು ಕುಪ್ಪಳಿಸಿ, ಸಿಹಿ ಹಂಚಿ ಸಂಭ್ರಮಿಸೋದರ ಜೊತೆಗೆ ಯಾವಾಗ ಈ ಸಿನಿಮಾ ಶೂಟಿಂಗ್ ಶುರುವಾಗುತ್ತೆ? ಯಾವಾಗ ಯುವ ಅಪ್ಪು ಮಾಡಬೇಕಿದ್ದ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ? ಅನ್ನೋ ಕಾತರ ಯುವ ಫ್ಯಾನ್ಸ್ ಗಳಲ್ಲಿದೆ. ಆದ್ರೆ ಯುವ ಮೊದಲ ಸಿನಿಮಾ ಅನೌನ್ಸ್ ಆದ ಮೇಲೆ ಶೂಟಿಂಗ್ ಅಪ್ಡೇಟ್ ಆಗಲಿ, ಟೈಟಲ್ ಬಗ್ಗೆಯಾಗಲಿ, ಹೊಂಬಾಳೆಯವರು ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಗಲಿ ಈ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ.
ಅದರೆ ಯುವ ಮೊದಲ ಸಿನಿಮಾ ಶೂಟಿಂಗ್ ಅಡ್ಡಕ್ಕೆ ಯಾವಾಗ ಎಂಟ್ರಿ ಕೊಡುತ್ತಾರೆ ಅನ್ನೋ ಮಾಹಿತಿ 'ಈಟಿವಿ ಭಾರತ'ಕ್ಕೆ ಸಿಕ್ಕಿದೆ. ಒಂದು ಪೋಸ್ಟರ್ ಮೂಲಕ ಹೊಂಬಾಳೆ ಫಿಲಂಸ್ ಯುವ ಮೊದಲ ಸಿನಿಮಾವನ್ನು ಅನೌಸ್ ಮಾಡಿತ್ತು. ಇದೀಗ ಈ ಚಿತ್ರದ ಮುಹೂರ್ತವನ್ನು ಡಿಸೆಂಬರ್ ಮೊದಲ ವಾರದಲ್ಲಿ ಅದ್ಧೂರಿಯಾಗಿ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ ಧನುರ್ಮಾಸ ಮುಗಿದ ಮೇಲೆ ಶೂಟಿಂಗ್ ಆರಂಭಿಸಲು ಸಂತೋಷ್ ಆನಂದ್ ರಾಮ್ ಶೆಡ್ಯೂಲ್ ಸ್ಕೆಚ್ ಹಾಕಿದ್ದಾರೆ ಅನ್ನೋ ಮಾಹಿತಿ ಯುವ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ನಿರ್ದೇಕರು ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಮಾಡಿ, ಯುವನಿಗಾಗಿ ತಂದೆ ಮಗನ ವಾತ್ಸಲ್ಯದ ಕತೆ ಮಾಡಿಕೊಂಡಿದ್ದಾರೆ. ಸದ್ಯ ರಾಘವೇಂದ್ರ ಸ್ಟೋರ್ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ರಾಘವೇಂದ್ರ ಸ್ಟೋರ್ ಚಿತ್ರವನ್ನು ರಿಲೀಸ್ ಮಾಡಿದ ಬಳಿಕ, ಯುವ ಜೊತೆ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ. ಹೊಂಬಾಳೆ ಫಿಲ್ಮ್ ಸಂಸ್ಥೆ ಮಯೂರ ಟೈಟಲ್ ರಿಜಿಸ್ಟರ್ ಆಗಿದ್ದು, ಈ ಚಿತ್ರಕ್ಕೆ ಮಯೂರ ಟೈಟಲ್ ಇಡುತ್ತಾರ ಅನ್ನೋ ಕುತೂಹಲ ಹೆಚ್ಚಿಸಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ತಿಂಗಳು ಉತ್ತರ ಸಿಗಲಿದೆ.
ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ ಚಿತ್ರದ ಟೈಟಲ್ ಬಿಡುಗಡೆ: ಚಿತ್ರದ ಬಗ್ಗೆ ಕುತೂಹಲ ಇದೆ ಎಂದ ಸಂಜುಬಾಬಾ