ನಾವಿಕ, ಅತಿರಥ, ನುಗ್ಗೇಕಾಯಿ, ಲೋಕಲ್ ಟ್ರೈನ್, ಲಂಕೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಗ್ಲಾಮರ್ ಬ್ಯೂಟಿ ಎಸ್ತರ್ ನರೋನ್ಹಾ ಅವರು 'ದಿ ವೆಕೆಂಟ್ ಹೌಸ್' ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಎಸ್ತರ್ ನರೋನ್ಹಾ 'ದಿ ವೆಕೆಂಟ್ ಹೌಸ್' ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣ, ಸಂಗೀತ, ಸಾಹಿತ್ಯ, ಕಥೆ, ಕಾಸ್ಟ್ಯೂಮ್, ನಟನೆ ಎಲ್ಲಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
'ದಿ ವೆಕೆಂಟ್ ಹೌಸ್' ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನವಿದೆ. 'ದಿ ವೆಕೆಂಟ್ ಹೌಸ್' ಸಿನಿಮಾವನ್ನು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಖಾಲಿ ಮನೆಯ ಸುತ್ತ ನಡೆಯುವ ಘಟನೆ ಆಧಾರಿತವಾಗಿ ಸಿನಿಮಾ ಮಾಡಲಾಗಿದೆ.
ಇತ್ತೀಚೆಗೆ ಚಿತ್ರದ ಬಗ್ಗೆ ಮಾತನಾಡಿದ್ದ ಎಸ್ತರ್, "ಲಾಕ್ಡೌನ್ ಸಮಯದಲ್ಲಿ ಶುರುವಾದ ಪ್ರಯತ್ನ ಇದು. ಈ ಸಿನಿಮಾದಲ್ಲಿ ಕಾಣಿಸುವುದು ನಮ್ಮ ತೋಟದ ಮನೆ. ಲಾಕ್ಡೌನ್ ಟೈಮ್ನಲ್ಲಿ ನಾವು ಅಲ್ಲಿಗೆ ಶಿಫ್ಟ್ ಆಗಿದ್ದೆವು. ಆ ಸಮಯದಲ್ಲಿ ಒನ್ ಲೈನ್ ಹೊಳೆಯಿತು. ಅದನ್ನು ನಮ್ಮ ತಾಯಿ ಬಳಿ ಚರ್ಚೆ ಮಾಡಿ ಕಥೆ ಬರೆಯಲು ಶುರು ಮಾಡಿದೆ. ಕಥೆ ರೆಡಿಯಾಯ್ತು. ನಾನೇ ಸಿನಿಮಾ ಡೈರೆಕ್ಟರ್ ಮಾಡ್ತೀನಿ ಅಂದುಕೊಂಡಿರಲಿಲ್ಲ. ಕಥೆ ಬರೆದ ಮೇಲೆ ಬೇರೆ ಅವರ ಹತ್ತಿರ ರಿಕ್ವೆಸ್ಟ್ ಮಾಡುವುದು ಹೇಗೆ? ಲಾಕ್ಡೌನ್ ಇರುವುದರಿಂದ ಅವರು ಬರುವುದು ಹೇಗೆ ಎಂಬ ಸಮಸ್ಯೆ ಕಾಡಿತು. ಹೀಗಾಗಿ ನಾನೇ ನಿರ್ದೇಶಿಸಿದೆ. ಇದೊಂದು ಫ್ಯಾಮಿಲಿ ವೆಂಚರ್ಸ್ ಸಿನಿಮಾ. ಕೊಂಕಣಿ ಹಾಗೂ ಕನ್ನಡ ಎರಡು ಭಾಷೆಯಲ್ಲಿ ಸಿನಿಮಾ ಮಾಡಿದ್ದೇವೆ" ಎಂದು ತಿಳಿಸಿದ್ದರು.
ಇದನ್ನೂ ಓದಿ: ಎಸ್ಆರ್ಕೆ ಬರ್ತ್ಡೇ: ಅದ್ಭುತ ನಟನೆ, ಕಥೆಯ ಹೊರತಾಗಿಯೂ ಬಾಕ್ಸ್ ಆಫೀಸ್ನಲ್ಲಿ ಮಂಕಾದ ಶಾರುಖ್ ಸಿನಿಮಾಗಳಿವು!
ಎಸ್ತರ್ ನರೋನ್ಹಾ ಅವರು ಮಂಗಳೂರಿನವರು. ಆದರೆ ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಕನ್ನಡದ 'ಉಸಿರಿಗಿಂತ ನೀನೇ ಹತ್ತಿರ' ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅವರು ಬಳಿಕ, ತೆಲುಗು, ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ.
ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಇನಾಮ್ದಾರ್ ಸಿನಿಮಾದ ಸಿಲ್ಕು ಮಿಲ್ಕು ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿರುವ ಎಸ್ತಾರ್ ಗ್ಲಾಮರ್ ನಂಬರ್ಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ರಾಜ್ಯಾದ್ಯಂತ ರಿಲೀಸ್ ಆಗಿರುವ ಇನಾಮ್ದಾರ್ ಚಿತ್ರಕ್ಕೆ ಮೆಚ್ಚುಗೆ ಸಿಗುತ್ತುದೆ. ನರೋನ್ಹಾ ಕುಣಿದು ಕುಪ್ಪಳಿಸಿರುವ ಸಿಲ್ಕು ಸಖತ್ ಹಿಟ್ ಆಗಿದೆ. ಈ ಖುಷಿ ಬೆನ್ನಲ್ಲೇ ಎಸ್ತರ್ ಚೊಚ್ಚಲ ಕನಸು 'ದಿ ವೆಕೆಂಟ್ ಹೌಸ್' ಚಿತ್ರ ನವೆಂಬರ್ 10ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಗರಡಿ ಸಿನಿಮಾ ನೋಡಿ ನಮ್ಮಂಥ ಕಲಾವಿದರಿಗೆ ಅನ್ನದಾತರಾಗಿ: ಅಭಿಮಾನಿಗಳಿಗೆ ದರ್ಶನ್ ಮನವಿ