ಐದು ವಿಭಿನ್ನ ಕಥೆಗಳನ್ನು ಹೇಳುವ ಅಂಥಾಲಜಿ ಸಿನಿಮಾ ಪೆಂಟಗನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಐವರು ನಿರ್ದೇಶಕರು ಐದು ಕಥೆಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರತಿಯೊಂದು ಕಥೆಗೂ ಒಂದಕ್ಕೊಂದು ಲಿಂಕ್ ಇದ್ದು, ಸಂಪೂರ್ಣ ಹೊಸಬರಿಗೆ ಈ ಚಿತ್ರದಲ್ಲಿ ಅವಕಾಶ ನೀಡಲಾಗಿದೆ. ಈ ಚಿತ್ರವನ್ನು ನಿರ್ದೇಶಕ ಕಮ್ ನಿರ್ಮಾಪಕ ಗುರು ದೇಶಪಾಂಡೆ ಅವರು ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದು, ಜಿ.ಅಕಾಡೆಮಿಯ ಒಂದಷ್ಟು ವಿದ್ಯಾರ್ಥಿಗಳು ಸಹ ಇದರಲ್ಲಿ ಕೆಲಸ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಹಾಗೂ ಮಹೇಶ್ ಸುಖಧರೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೆಂಟಗನ್ ಕಥೆಗಳು: ಐದು ವಿಭಿನ್ನ ಕಥೆಗಳನ್ನು ಒಳಗೊಂಡ ಈ ಚಿತ್ರವನ್ನು ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ನಿರ್ದೇಶಿಸಿದ್ದಾರೆ. ಮೈಸೂರು ಪಾಕ್, ಕಾಮಾತುರಾಣಾ ನಭಯಂ, ನಲಜ್ಜ, ದೋಣಿಸಾಗಲಿ, ಮಿಸ್ಟರ್ ಗೋಪಿ ಕೆಫೆ ಸೇರಿ ಐದು ಕಥೆಗಳು ಈ ಸಿನಿಮಾದಲ್ಲಿದೆ. ಹಿರಿಯನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅನುಷಾ ರೈ, ವಂಶಿಕೃಷ್ಣ, ಅಪೂರ್ವ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಮಹೇಶ್ ಸುಖಧರೆ ಮಾತನಾಡಿ, ಗುರು ದೇಶಪಾಂಡೆ ನನ್ನ ಶಿಶ್ಯ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ, ಸೈನಿಕ ಚಿತ್ರದಲ್ಲಿ ನನ್ನಜೊತೆ ಅವರು ಕೆಲಸ ಮಾಡಿದ್ದಾರೆ. ಪ್ರಸ್ತುತ ಸಮಾಜಕ್ಕೇನು ಬೇಕೋ ಅದು ಈ ಐದೂ ಕಥೆಗಳಲ್ಲಿದೆ ಅಂತ ಕಾಣುತ್ತದೆ. ನಾವುಗಳು ಒಂದು ಸಿನಿಮಾ ಮಾಡೋದೇ ದೊಡ್ಡ ಸಾಹಸವಾಗಿರುತ್ತೆ. ಆದರೆ ಗುರುಗೆ ಡಬಲ್ ಗುಂಡಿಗೆ ಇದೆ. ಐದು ಜನ ನಿರ್ದೇಶಕರನ್ನು ಒಟ್ಟಿಗೇ ಸೇರಿಸಿ ಚಿತ್ರ ಮಾಡೋದು ಸುಲಭದ ಮಾತಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗುರು ದೇಶಪಾಂಡೆ ಅವರು ಈ ಸಿನಿಮಾದಲ್ಲಿ ಎಲ್ಲಾ ಥರದ ಎಮೋಷನ್‌ಗಳನ್ನು ತಂದಿದ್ದಾರೆ. ಹೊಸತನ ತರುವ ಇಂತಹ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕು ಎಂದು ಹಿರಿಯ ನಿರ್ದೇಶಕ ಟಿಎಸ್ ನಾಗಾಭರಣ ಅವರು ತಿಳಿಸಿದರು.
ಚಿತ್ರದ ಕುರಿತು ಮಾತನಾಡಿದ ಗುರು ದೇಶಪಾಂಡೆ, ಕೋವಿಡ್ ಕಾಲದಲ್ಲಿ ಈ ಚಿತ್ರವನ್ನು ಶುರು ಮಾಡಿದೆವು. ಎರಡೂ ಕೋವಿಡ್ ಅಲೆಗಳನ್ನು ದಾಟಿ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದೇವೆ. ಚಿತ್ರದಲ್ಲಿ ಬರುವ ಡೆತ್ ಥೀಮ್ 5 ಕಥೆಗಳಲ್ಲೂ ಕಾಮನ್ ಆಗಿದೆ. ಸಾಕಷ್ಟು ಹೊಸ ಪ್ರತಿಭೆಗಳಿಗೆ ಈ ಚಿತ್ರದ ಮೂಲಕ ಅವಕಾಶ ನೀಡಿದ್ದೇವೆ ಎಂದು ಹೇಳಿದರು.
ಗ್ರಾಮೀಣ ಸೊಗಡಿನ ದೋಣಿ ಸಾಗಲಿ ಕಥೆಯನ್ನು ಕಿರಣ್ ಕುಮಾರ್ ನಿರ್ದೇಶಿಸಿದ್ದು, ಇದರ ಮುಖ್ಯ ಪಾತ್ರದಲ್ಲಿ ನಿರ್ಮಾಪಕರ ಪತ್ನಿ ಕೃತಿಕಾ ದೇಶಪಾಂಡೆ, ರವಿಶಂಕರ್ ಇವರೊಂದಿಗೆ ವಂಶಿ, ಅನುಶಾ ರೈ ಮುಂತಾದವರು ನಟಿಸಿದ್ದಾರೆ. ಮತ್ತೊಂದು ಕಥೆಯ ಹೆಸರು ಮೈಸೂರು ಪಾಕ್ ಅನ್ನು ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ ಶ್ರೀವತ್ಸ ಇದನ್ನು ನಿರ್ದೇಶಿಸಿದ್ದಾರೆ. ಮೂರನೇ ಕಥೆಯಲ್ಲಿ ಕೊರೋನಾ ಸಮಯದಲ್ಲಿ ಹಿರಿಯರಿಗೆ ಹೇಗಲ್ಲಾ ತೊಂದರೆಯಾಯ್ತು ಎಂಬುದನ್ನು ಇದರಲ್ಲಿ ಹೇಳಲಾಗಿದೆ. ನಾಲ್ಕನೇ ಕಥೆಯಲ್ಲಿ ಡೇಟಿಂಗ್ ಆಪ್, ಸೋಷಿಯಲ್ ಮೀಡಿಯಾ ವಂಚನೆಗಳಿಗೆ ಯುವಜನತೆ ಹೇಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ರಾಘು ಶಿವಮೊಗ್ಗ ನಿರ್ದೇಶನದ ಕಾಮಾತುರಾಣಾ ನಭಯಂ, ನಲಜ್ಜ ಚಿತ್ರದಲ್ಲಿ ಹೇಳಲಾಗಿದೆ. ಪ್ರಕಾಶ್ ಬೆಳವಾಡಿ, ತನಿಶಾ, ಪ್ರೇರಣಾ ಕಂಬಂ, ಕಿರಣ್ ನಾಯಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇದನ್ನೂ ಓದಿ: ನರೇಶ್, ಪವಿತ್ರ ಅಭಿನಯದ 'ಮತ್ತೆ ಮದುವೆ' ಚಿತ್ರದ ಫಸ್ಟ್ಲುಕ್ ರಿಲೀಸ್