ಕನ್ನಡ ಚಿತ್ರರಂಗದಲ್ಲಿ 35 ವರ್ಷ, 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಇವತ್ತಿಗೂ ನಿರ್ಮಾಪಕರ ಅಚ್ಚುಮೆಚ್ಚಿನ ನಟ ಎಂದರೇ ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ವಯಸ್ಸು ಅರವತ್ತಾದರೂ, ಇವತ್ತಿನ ಯುವ ನಟರಿಗೆ ಸೈಡ್ ಹೊಡೆಯುವ ಸೆಂಚುರಿ ಸ್ಟಾರ್ಗೆ ನಾಳೆ (ಮಂಗಳವಾರ) ಹುಟ್ಟಿದ ದಿನ.
60ನೇ ವಸಂತಕ್ಕೆ ಕಾಲಿಡುತ್ತಿರುವ ಕರುನಾಡ ಚಕ್ರವರ್ತಿ, ಈ ವರ್ಷ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕಾರಣ ಸಹೋದರ ಪುನೀತ್ ರಾಜ್ ಕುಮಾರ್ ಅಗಲಿಕೆಯ ನೋವು ಇನ್ನು ಸೆಂಚುರಿ ಸ್ಟಾರ್ಗೆ ಕಾಡುತ್ತಿರುವುದು. ಹೀಗಾಗಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ಹ್ಯಾಟ್ರಿಕ್ ಹೀರೋ ನಿರ್ಧರಿಸಿದ್ದಾರೆ.
ಆದರೆ, ಶಿವರಾಜ್ ಕುಮಾರ್ ಬಳಗದ ಶಿವಸೈನ ಸಂಘ ಸೋಷಿಯಲ್ ಮೀಡಿಯಾದಲ್ಲಿ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದೆ. ಜೊತೆಗೆ ಶಿವರಾಜ್ ಕುಮಾರ್ ಈ ವರ್ಷ ತಮ್ಮ ನಾಗವಾರ ನಿವಾಸದಲ್ಲಿ ಇರುವುದಿಲ್ಲ. ಈ ಹಿನ್ನೆಲೆ ಅವರು ವಾಸವಿರುವ ಶ್ರೀಮುತ್ತು ಮನೆ ಅಂದ್ರೆ, ಮಾನ್ಯತಾ ರೆಸಿಡೆನ್ಸಿಯ ನಾಗರಿಕರು ಸದಾ ನೆನಪಿನಲ್ಲಿ ಉಳಿಯುವ ಹುಟ್ಟು ಹಬ್ಬದ ಉಡುಗೊರೆ ಕೊಡಲು ಸಜ್ಜಾಗಿದ್ದಾರೆ.
ಕಳೆದ 15 ವರ್ಷಗಳಿಂದ ಶಿವರಾಜ್ ಕುಮಾರ್, ಹೆಬ್ಬಾಳ ಬಳಿಯಿರುವ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ವಾಸವಾಗಿದ್ದಾರೆ. ಮಾನ್ಯತಾ ರೆಸಿಡೆನ್ಸಿಯ ನಾಗರಿಕರು ಸೇರಿ ಈಗ ಮಾನ್ಯತಾ ರೆಸಿಡೆನ್ಸಿ ಬಳಿಯಿರುವ ವೃತ್ತಕ್ಕೆ ಡಾ.ಶಿವರಾಜ್ ಕುಮಾರ್ ಹೆಸರಿಡಲು ನಿರ್ಧಾರ ಮಾಡಿದ್ದಾರೆ. 2007 ರಿಂದ ಶಿವರಾಜ್ ಕುಮಾರ್ ಇಲ್ಲಿ ವಾಸವಿದ್ದು, ಇಲ್ಲಿನ ನಿವಾಸಿಗಳ ಜೊತೆ ತುಂಬಾ ಆತ್ಮೀಯವಾಗಿ ಇದ್ದಾರೆ.

ಮತ್ತೊಂದು ಕಡೆ ತಾನ್ನೊಬ್ಬ ರಾಜ್ ಕುಮಾರ್ ಮಗ ಹಾಗೂ ಸ್ಟಾರ್ ನಟ ಎಂಬ ಅಹಂ ಇಲ್ಲದೇ ಶಿವರಾಜ್ ಕುಮಾರ್, ಮಾನ್ಯತಾ ರೆಸಿಡೆನ್ಸಿಯಲ್ಲಿ ವಾಸವಾಗಿರುವ ಜನರ ಜೊತೆ ಬೆರೆಯುತ್ತಾರೆ. ಅಷ್ಟೇ ಅಲ್ಲ ಶಿವರಾಜ್ ಕುಮಾರ್, ಮಾನ್ಯತಾ ರೆಸಿಡೆನ್ಸಿ ಅಸೋಸಿಯೇಷನ್ ಬೆಳವಣಿಗೆಗೆ ಕೈ ಜೋಡಿಸಿದ್ದಾರೆ. ಕರುನಾಡ ಚಕ್ರವರ್ತಿಯ ಈ ಸರಳತೆಗೆ ಇಲ್ಲಿನ ನಿವಾಸಿಗಳು ಮನಸೋತಿದ್ದಾರೆ.
ಇದನ್ನೂ ಓದಿ: ಮೇಲಿಂದ ಮೇಲೆ ಹಿಟ್ ಕೊಡುತ್ತಿರುವ ಸೌತ್ ಸುಂದರಿಯರು: ಬಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಕನ್ನಡತಿ
ಇನ್ನು ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಅಲ್ಲಿನ ನಾಗರಿಕರ ಜೊತೆಗೂಡಿ, ನಿತ್ಯ ಬೆಳಗ್ಗೆ ಶಿವಣ್ಣ ಪಾರ್ಕ್ನಲ್ಲಿ ವಾಕಿಂಗ್ ಮಾಡ್ತಾರೆ. ಶಿವಣ್ಣನ ನೋಡುವ ಸಲುವಾಗಿ ನಮ್ಮ ಮಾನ್ಯತಾ ರೆಸಿಡೆನ್ಸಿಯ ಎಷ್ಟೋ ಮಂದಿ ವಾಕಿಂಗ್ ಬರ್ತಾರೆ. ಹೀಗಾಗಿ ಮಾನ್ಯತಾ ರೆಸಿಡೆನ್ಸಿಯ ಜನರು, ನಾಳೆ ಶಿವರಾಜ್ ಕುಮಾರ್ 60ನೇ ಹುಟ್ಟುಹಬ್ಬದ ದಿನವೇ, ವೃತ್ತಕ್ಕೆ ಶಿವಣ್ಣನ ಹೆಸರಿಡಲು ಎಲ್ಲಾ ತಯಾರಿ ನಡೆಸಿದ್ದಾರೆ.
ನಾಳೆ ಬೆಳಗ್ಗೆ 9 ಗಂಟೆಗೆ ಶಿವರಾಜ್ ಕುಮಾರ್ ಅವರ ಶ್ರೀಮುತ್ತು ನಿವಾಸದಿಂದ ಹಿಡಿದು ಮಾನ್ಯತಾ ವೃತ್ತದ ತನಕ ಸರಳ ಕಾರ್ಯಕ್ರಮ ಮಾಡಿ ವೃತ್ತಕ್ಕೆ, ಅವರ ಹೆಸರಿಡಲಾಗುವುದು. ಇದು ಶಿವರಾಜ್ ಕುಮಾರ್ ಅವರ ಸಿನಿಮಾ ಕೆರಿಯರ್ನಲ್ಲಿ ಸದಾ ನೆನಪಿನ ಉಳಿಯುವ ಉಡುಗೊರೆ ಇದಾಗಿದೆ.