ಸುದಿಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಉತ್ತಮ ಪ್ರದರ್ಶನ ಕಾಣುತ್ತಿದೆ. ಕೆಲವೆಡೆ ಚಿತ್ರ ಬ್ಯಾನ್ ಆಗಿದ್ದರೂ, ಉಳಿದೆಡೆ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ. ವಿವಾದಗಳನ್ನು ಎದುರಿಸಿ ಬಿಡುಗಡೆ ಆದ ಈ ಚಿತ್ರವು 2023ರಲ್ಲಿ ತೆರೆ ಕಂಡ ಅನೇಕ ಸ್ಟಾರ್ ಸಿನಿಮಾಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
ಸುದಿಪ್ತೋ ಸೇನ್ ಆ್ಯಕ್ಷನ್ ಕಟ್ ಹೇಳಿರುವ ಈ 'ದಿ ಕೇರಳ ಸ್ಟೋರಿ' ಸಿನಿಮಾ ಒಂದು ವಾರದೊಳಗೆ 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವಲ್ಲಿ ಯಶಸ್ವಿ ಆಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್‌ನಿಲ್ಕ್ ಪ್ರಕಾರ, ಮಂಗಳವಾರದಂದು ಈ ಚಿತ್ರ 11 ಕೋಟಿ ರೂಪಾಯಿ ಗಳಿಸಿದೆ. ಈವರೆಗಿನ ಒಟ್ಟು ಸಂಗ್ರಹ 56.72 ಕೋಟಿ ರೂಪಾಯಿ. ಹಿಂದಿ ಆಕ್ಯುಪೆನ್ಸಿ (ಹಿಂದಿ ಆವೃತ್ತಿ ನೋಡಿದವರ ಪ್ರಮಾಣ) ಶೇ. 29.67ರಷ್ಟಿತ್ತು.
ಬಿಡುಗಡೆಯಾದ ಬಳಿಕ ಐದನೇ ದಿನದ ಚಿತ್ರದ ಗಳಿಕೆಯು ನಾಲ್ಕನೇ ದಿನಕ್ಕಿಂತ ಉತ್ತಮವಾಗಿದೆ. ಒಂದು ಮಾಹಿತಿ ಪ್ರಕಾರ, ಅದಾ ಶರ್ಮಾರನ್ನು ಒಳಗೊಂಡಿರುವ ಈ ಕೇರಳ ಸ್ಟೋರಿಯು 8.03 ಕೋಟಿ ರೂ.ನಿಂದ (ಮೊದಲ ದಿನದ ಕಲೆಕ್ಷನ್) ಬಾಕ್ಸ್ ಆಫೀಸ್ ಸಂಖ್ಯೆ ಪ್ರಾರಂಭಿಸಿತು. ಈವರೆಗೆ 56.72 ಕೋಟಿ ರೂಪಾಯಿ ಸಂಗ್ರಹಿಸಿದೆ. 2022ರ ದಿ ಕಾಶ್ಮೀರ್ ಫೈಲ್ಸ್ ಕೂಡ ವಿವಾದಗಳಿಂದಲೇ ತೆರೆಕಂಡು ಯಶಸ್ವಿ ಆಗಿತ್ತು. ಆದರೆ 'ದಿ ಕೇರಳ ಸ್ಟೋರಿ' ಸಿನಿಮಾ ದಿ ಕಾಶ್ಮೀರ್ ಫೈಲ್ಸ್‌ಗಿಂತ ಹಿಂದುಳಿದಿದೆ. ವಿವೇಕ್ ಅಗ್ನಿಹೋತ್ರಿ ಅವರ ಚಿತ್ರ ಮೊದಲ ದಿನ 18 ಕೋಟಿ ರೂ. ಗಳಿಸಿತ್ತು.
'ದಿ ಕೇರಳ ಸ್ಟೋರಿ'ಯಲ್ಲಿ ಸತ್ಯಾಂಶಗಳನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದರೂ ಸಿನಿಮಾವನ್ನು ನೋಡಲು ಜನ ಚಿತ್ರಮಂದಿರಗಳತ್ತ ಮುಗಿ ಬೀಳುತ್ತಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು ಚಲನಚಿತ್ರವನ್ನು ನಿಷೇಧಿಸಿದ ಒಂದು ದಿನದ ನಂತರ ಉತ್ತರ ಪ್ರದೇಶ ಸರ್ಕಾರವು ಮಂಗಳವಾರ ಸಿನಿಮಾವನ್ನು 'ತೆರಿಗೆ ಮುಕ್ತ' ಮಾಡಿ ಘೋಷಿಸಿತು.
ಇದನ್ನೂ ಓದಿ: ಮತ ಚಲಾಯಿಸಿದ ರಾಕಿಭಾಯ್: ಸಿನಿಮಾ, ರಾಜಕೀಯ, ಪ್ರಚಾರದ ಬಗ್ಗೆ ಯಶ್ ಮನದಾಳದ ಮಾತು
ಐದೇ ದಿನಗಳಲ್ಲಿ ದಿ ಕೇರಳ ಸ್ಟೋರಿ 50 ಕೋಟಿ ರೂ.ಗಳ ಗಡಿ ದಾಟಿದೆ. ಇದಕ್ಕೆ ಹೋಲಿಸಿದರೆ, ಅಜಯ್ ದೇವಗನ್ ಅವರ ಭೋಲಾ ಚಿತ್ರ ಯಶಸ್ವಿಯಾಗಲು 7 ದಿನ ತೆಗೆದುಕೊಂಡಿದೆ. ಅಕ್ಷಯ್ ಕುಮಾರ್ ಅವರ ಸೆಲ್ಫಿ ಒಟ್ಟು 16.85 ಕೋಟಿ ರೂ. ಮತ್ತು ಕಾರ್ತಿಕ್ ಆರ್ಯನ್ ಅವರ ಶೆಹಜಾದಾ 32.20 ಕೋಟಿ ರೂ. ಗಳಿಸಿದೆ. ಸ್ಟಾರ್ ನಟರ ಆ ಸಿನಿಮಾಗಳ ಸಂಗ್ರಹವು ದಿ ಕೇರಳ ಸ್ಟೋರಿಯ ಐದು ದಿನಗಳ ಒಟ್ಟು ಮೊತ್ತಕ್ಕೂ ಹತ್ತಿರವಿಲ್ಲ.
ಇದನ್ನೂ ಓದಿ: PHOTOS: 'ನಾವು ಮತದಾನ ಮಾಡಿದ್ವಿ, ನೀವೂ ವೋಟ್ ಮಾಡಿ'.. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಕರೆ
'ದಿ ಕೇರಳ ಸ್ಟೋರಿ'ಯನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಿದ ಬಗ್ಗೆ ಬಾಲಿವುಡ್ ನಟಿ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಸದಸ್ಯೆ ವಾಣಿ ತ್ರಿಪಾಠಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಿನಿಮಾ ಬಗ್ಗೆ ನಿರ್ಧರಿಸುವುದು ಪ್ರೇಕ್ಷಕರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ. ಈ ಬ್ಯಾನ್ ಕ್ರಮವು 'ಪ್ರಜಾಪ್ರಭುತ್ವ ವಿರೋಧಿ' ಎಂದೂ ಕೂಡ ಹೇಳಿದ್ದಾರೆ.