ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಆ್ಯಸಿಡ್ ದಾಳಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ಅವರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ಕುಟುಂಬದವರ ಮುಂದೆ ಇಂಗಿತ ವ್ಯಕ್ತಪಡಿಸಿರುವ ಯುವತಿ, ನಾನು ಸುದೀಪ್ ಅಪ್ಪಟ ಅಭಿಮಾನಿಯಾಗಿದ್ದು, ಅವರ ಅಭಿನಯದ ಸಾಕಷ್ಟು ಚಿತ್ರಗಳನ್ನ ನೋಡಿದ್ದೇನೆ. ನನಗೆ ಅವರ ಎಲ್ಲಾ ಸಿನಿಮಾಗಳೂ ಇಷ್ಟ. ಆ್ಯಸಿಡ್ ದಾಳಿಗೆ ಒಳಗಾಗುವ ಮುನ್ನವೂ ನಾನು ಅವರ ಸಿನಿಮಾಗಳನ್ನು ನೋಡಿದ್ದೇನೆ. ನಾನು ಅವರನ್ನು ಭೇಟಿಯಾಗಬೇಕು ಎಂದಿದ್ದಾರೆ.
ಸಂತ್ರಸ್ತೆ ಇನ್ನೂ ಕೂಡ ಸೈಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಾಗಲೇ ಅವರಿಗೆ ಎರಡು ಬಾರಿ ಬ್ಲಡ್ ಮತ್ತು ಸ್ಕಿನ್ ಪ್ಲಾಂಟೇಷನ್ ಸರ್ಜರಿ ನಡೆಸಲಾಗಿದೆ. ಈ ನಡುವೆ ಕುಟುಂಬಸ್ಥರ ಬಳಿ ಸುದೀಪ್ ನೋಡುವ ಆಸೆ ಹೇಳಿಕೊಂಡಿದ್ದಾರೆ. ಈ ಸಂಕಟದ ನಡುವೆಯೂ ಅವರು ನಾಲ್ಕು ಬಾರಿ ಸುದೀಪ್ ನೋಡಬೇಕು ಅಂತಾ ಕೇಳಿದ್ದಾರೆ. ಸದ್ಯಕ್ಕೆ ಯುವತಿಯನ್ನು ಸಮಾಧಾನಪಡಿಸಲು ಕುಟುಂಬದವರು ಸುದೀಪ್ ಬ್ಯುಸಿಯಾಗಿದ್ದಾರೆ ಅಂತಾ ಸಮಾಧಾನ ಮಾಡಿದ್ದಾರಂತೆ.
ಅನಾರೋಗ್ಯಕ್ಕೆ ತುತ್ತಾದ ಅನೇಕ ಅಭಿಮಾನಿಗಳನ್ನು ಕಿಚ್ಚ ಈ ಹಿಂದೆ ಹಲವು ಬಾರಿ ಭೇಟಿಯಾಗಿದ್ದರು. ಆ್ಯಸಿಡ್ ದಾಳಿಗೆ ಒಳಗಾಗಿರುವ ಈ ಅಭಿಮಾನಿಯ ಆಸೆಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಡೇರಿಸಲಿ ಎಂಬುದು ಕುಟುಂಬಸ್ಥರ ಒತ್ತಾಸೆಯಾಗಿದೆ.