ಚೆನ್ನೈ (ತಮಿಳುನಾಡು): ತಮಿಳು ನಟ ವಿಜಯ್ ಅವರ ಅಪಾರ ಅಭಿಮಾನಿಗಳು ಚೆನ್ನೈನ ಕೋಯಂಬೇಡುನಲ್ಲಿರುವ ರೋಹಿಣಿ ಥಿಯೇಟರ್‌ನಲ್ಲಿ ಗುರುವಾರ ಜಮಾಯಿಸಿದ್ದರು. ಚೆನ್ನೈನ ಅತ್ಯಂತ ಪ್ರಸಿದ್ಧ ಚಿತ್ರಮಂದಿರದಲ್ಲಿ ಲಿಯೋ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಯಿತು. ಟ್ರೈಲರ್ ವೀಕ್ಷಿಸಿ ಖುಷಿಯಲ್ಲಿ ತೇಲಾಡಿದ ಅಭಿಮಾನಿಗಳು ಚಿತ್ರಮಂದಿರಕ್ಕೆ ಭಾರಿ ಹಾನಿ ಉಂಟು ಮಾಡಿದ್ದಾರೆ.
ಚಿತ್ರದ ಟ್ರೇಲರ್ ಸ್ಕ್ರೀನಿಂಗ್ ವೇಳೆ ವಿಜಯ್ ಅಭಿಮಾನಿಗಳು ತಮ್ಮ 'ದಳಪತಿ'ಯನ್ನು ತೆರೆಯ ಮೇಲೆ ಅದ್ಧೂರಿಯಾಗಿಯೇ ಸಂಭ್ರಮಿಸಿದರು. ಅದೇ ಸಮಯದಲ್ಲಿ, ಅಭಿಮಾನಿಗಳು ನೃತ್ಯ ಮಾಡುತ್ತಾ, ಥಿಯೇಟರ್ ಕುರ್ಚಿಗಳ ಮೇಲೆ ಜಿಗಿದಾಡಿದರು. ಇದರಿಂದ ಬಹುತೇಕ ಕುರ್ಚಿಗಳು ಮುರಿದು ಬಿದ್ದಿವೆ. ಈಗ ವಿಡಿಯೋ ವೈರಲ್ ಆಗಿದೆ. ಈ ಘಟನೆಯನ್ನು ಹಲವು ನೆಟ್ಟಿಗರು ಟೀಕಿಸಿದ್ದಾರೆ.
ಅಭಿಮಾನಿಗಳು ಚಿತ್ರಮಂದಿರದ ಕುರ್ಚಿಗಳನ್ನು ಧ್ವಂಸ ಮಾಡಿರುವ ವಿಚಾರವು ಚಿತ್ರಮಂದಿರದ ಆಡಳಿತ ಮಂಡಳಿಯ ಮತ್ತು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಅದಕ್ಕೂ ಮುನ್ನ ಥಿಯೇಟರ್ ಆವರಣದಲ್ಲಿ ಟ್ರೇಲರ್ ಪ್ರದರ್ಶಿಸಲು ಅನುಮತಿ ನೀಡುವಂತೆ ರೋಹಿಣಿ ಥಿಯೇಟರ್ ಆಡಳಿತವು ಕೋಯಂಬೇಡು ಪೊಲೀಸರಿಗೆ ಮನವಿ ಮಾಡಿಕೊಂಡಿತ್ತು.
ಕಾಲಿವುಡ್ ಸೂಪರ್ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ 'ಲಿಯೋ' ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದ ಟ್ರೈಲರ್ ಅಭಿಮಾನಿಗಳು ಮತ್ತು ಸಾಮಾನ್ಯ ಪ್ರೇಕ್ಷಕರ ಗಮನ ಸೆಳೆದಿದೆ. ಅಲ್ಲದೆ, ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆಯ ವೀಕ್ಷಣೆಗಳನ್ನು ಪಡೆದಿದೆ.
ನಟ ವಿಜಯ್ ಅಭಿನಯದ ಲಿಯೋ ಚಿತ್ರದ ಮೇಲೆ ಅವರ ಅಭಿಮಾನಿಗಳು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಲಿಯೋ' ಚಿತ್ರವನ್ನು ಖೈದಿ, ಮಾಸ್ಟರ್ ಹಾಗೂ ವಿಕ್ರಮ್ನಂತಹ ಮಾಸ್ಟರ್ಪೀಸ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿದ್ದಾರೆ. 'ಮಾಸ್ಟರ್' ಚಿತ್ರದ ನಂತರ 'ಲಿಯೋ' ಮೂಲಕ ವಿಜಯ್ ಹಾಗೂ ಲೋಕೇಶ್ ಕನಕರಾಜ್ ಮತ್ತೆ ಒಂದಾಗಿದ್ದಾರೆ. ನಟ ವಿಜಯ್ ಅವರು ಈಗಾಗಲೇ ತಮ್ಮ ಪಾತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.
ಅಕ್ಟೋಬರ್ 19 ರಂದು ಬಿಡುಗಡೆ: ಈ ಚಿತ್ರವನ್ನು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಹಾಗೂ ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸವೆನ್ ಸ್ಕ್ರೀನ್ ಸ್ಟುಡಿಯೋದ ಲಲಿತ್ ಕುಮಾರ್ ನಿರ್ಮಿಸಿರುವ 'ಲಿಯೋ' ಸಿನಿಮಾ ಅಕ್ಟೋಬರ್ 19ಕ್ಕೆ ಬಿಡುಗಡೆಗೊಳ್ಳಲಿದೆ.
ಇದನ್ನೂ ಓದಿ: ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೇಲರ್ ಬಿಡುಗಡೆ