ಚೆನ್ನೈ: ತಮಿಳು ಸೂಪರ್ ಸ್ಟಾರ್ ವಿಜಯ್ ದಳಪತಿ ಅವರಿಗೆ 'ವಿಕ್ರಮ್' ನಿರ್ದೇಶಕ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಲಿಯೋ' ಸಿನಿಮಾದ ಡಿಜಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಮತ್ತು ಮ್ಯೂಸಿಕ್ ರೈಟ್ಸ್ ಭಾರಿ ಬೆಲೆಗೆ ಮಾರಾಟವಾಗಿದ್ದು, ಎಲ್ಲ ಸೇರಿ ಒಟ್ಟು 246 ಕೋಟಿ ರೂ.ಗಳನ್ನು ಲಿಯೋ ತನ್ನ ಬೊಕ್ಕಸಕ್ಕೆ ತುಂಬಿಕೊಂಡಿದೆ ಎಂದು ಎಂದು ವರದಿಗಳು ಹೇಳಿವೆ.
ಕೈದಿ, ಮಾಸ್ಟರ್ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಕಾಲಿವುಡ್ನ ಸೂಪರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಅವರು ಕಮಲಹಾಸನ್ ಅವರಿಗೆ ವಿಕ್ರಮ ಸಿನಿಮಾ ಮಾಡಿ, ಸಖತ್ ಸುದ್ದಿಯಲ್ಲಿದ್ದರು. ಇದೀಗ ವಿಜಯ್ ದಳಪತಿ ಅವರಿಗೆ ಲಿಯೋ ಸಿನಿಮಾ ಮಾಡುತ್ತಿದ್ದಾರೆ. ಇದು ವಿಜಯ್ ಹಾಗೂ ಲೋಕೇಶ್ ಕನಕರಾಜ್ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ.
ವಿಜಯ್ ದಳಪತಿಗೆ ಲೋಕೇಶ್ ಕನಕರಾಜ್ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದ್ದ ವಿಚಾರವಾಗಿತ್ತು. ಆದರೆ, ಚಿತ್ರದ ಹೆಸರು ಮಾತ್ರ ರಿವೀಲ್ ಆಗಿರಲಿಲ್ಲ. ಆದರೆ ಶುಕ್ರವಾರ ಲೋಕೇಶ್ ಕನಕರಾಜ್ ಅವರು ಸಿನಿಮಾ ಟೈಟಲ್ ಅನೌನ್ಸ್ಮೆಂಟ್ ಪ್ರೋಮೋ ರಿಲೀಸ್ ಮಾಡುತ್ತಿದ್ದಂತೆ, ಸಿನಿಮಾದ ಎಲ್ಲ ರೈಟ್ಸ್ಗೂ ಬೇಡಿಕೆ ಬರತೊಡಗಿದೆ. ಅದರಲ್ಲಿ ಡಿಜಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಮತ್ತು ಮ್ಯೂಸಿಕ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ ಎನ್ನುವ ಮಾತು ಸಿನಿದುನಿಯಾದಲ್ಲಿ ಕೇಳಿಬರುತ್ತಿದೆ.
ಲೋಕೇಶ್ ಕನಕರಾಜ್ ಅವರ ಹಿಂದಿನ ಚಿತ್ರ, ಕಮಲಹಾಸನ್ ಅಭಿನಯದ 'ವಿಕ್ರಮ್' ಸಿನಿಮಾ ಕಲೆಕ್ಷನ್ ದಾಖಲೆಯನ್ನು ಛಿದ್ರಗೊಳಿಸಿತ್ತು. ಇದೀಗ ವಿಜಯ್ ದಳಪತಿ ಜೊತೆ ಸೇರಿ ಮಾಡುತ್ತಿರುವ ಲಿಯೋ ಸಿನಿಮಾ ಕೂಡ ಅದೇ ಹಾದಿಯ್ಲಲಿ ಸಾಗುತ್ತಿದೆ ಎಂದು ಟಾಕ್ ಪ್ರಾರಂಭವಾಗಿದೆ. Tracktollywood.com ಪ್ರಕಾರ, ಸುಮಾರು 250 ಕೋಟಿ ಬಜೆಟ್ನಲ್ಲಿ ಲಿಯೋ ಚಿತ್ರವನ್ನು ನಿರ್ಮಿಸಲಾಗಿದೆ.
ಅದರಲ್ಲಿ ಈಗಾಗಲೇ ಸಿನಿಮಾ 246 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿಕೊಂಡಿದೆ. ಚಿತ್ರದ ಡಿಜಿಟಲ್ ಹಕ್ಕುಗಳು 150 ಕೋಟಿ ರೂ.ಗಳನ್ನು ಗಳಿಸಿದರೆ, ಸ್ಯಾಟ್ಲೈಟ್ ಹಕ್ಕುಗಳು 80 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ಮ್ಯೂಸಿಕ್ ರೈಟ್ಸ್ 16 ಕೋಟಿ ರೂಗಳಿಗೆ ಮಾರಾಟವಾಗಿದೆ. ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಂಡಿದ್ದು, ಹಿಂದಿ ಡಬ್ಬಿಂಗ್ ರೈಟ್ಸ್ನಿಂದಲೂ ಭಾರಿ ಗಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ವಿಜಯ್ ದಳಪತಿ ಅವರ ಕಾಂಬಿನೇಷನ್ನಲ್ಲಿ ಬಂದಿದ್ದ ಈ ಹಿಂದಿನ ಚಿತ್ರ 'ಮಾಸ್ಟರ್' ಬ್ಲಾಕ್ಬಸ್ಟರ್ ಹಿಂಟ್ ಕಂಡಿತ್ತು. ಇದೀಗ ಅದೇ ಜೋಡಿ 'ಲಿಯೋ' ಸಿನಿಮಾಗಾಗಿ ಮತ್ತೆ ಒಂದಾಗಿದ್ದು, ನಿರೀಕ್ಷೆಗಳು ಹೆಚ್ಚಾಗಿವೆ. ಸಿನಿಮಾದ ಪ್ರೋಮೋ ಬಿಟ್ಟ ಆರಂಭಿಕ ಹಂತದಲ್ಲಿ ಚಿತ್ರ ಇಷ್ಟೊಂದು ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತದೆ ಎನ್ನುವ ಊಹೆಯೂ ಇರಲಿಲ್ಲ ಎಂದು ಕೆಲವು ತಮಿಳು ಚಿತ್ರರಂಗದ ಮೂಲಗಳು ತಿಳಿಸಿವೆ.
ಈ ಸಿನಿಮಾದ ಮೂಲಕ 14 ವರ್ಷಗಳ ನಂತರ ವಿಜಯ್ ಹಾಗೂ ತ್ರಿಷಾ ಅವರು ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಕೊನೆಯದಾಗಿ ತ್ರಿಷಾ ಹಾಗೂ ವಿಜಯ್ ಅವರು ಕುರುವಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಇವರಲ್ಲದೇ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅರ್ಜುನ್ ಸರ್ಜಾ, ಮನ್ಸೂರ್ ಅಲಿ ಖಾನ್, ಗೌತಮ್ ವಾಸುದೇವ್ ಮೆನನ್ ಮತ್ತು ಪ್ರಿಯಾ ಆನಂದ್ ನಟಿಸಿದ್ದಾರೆ. ಈ ಮಧ್ಯೆ ಚಿತ್ರದ ಯೂಟ್ಯೂಬ್ ಪ್ರೋಮೋ ಕೂಡ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಶಾರುಖ್ ಖಾನ್ ಅಭಿನಯದ 'ಜವಾನ್' ಮತ್ತು 'ಟೈಗರ್ 3' ವೀಕ್ಷಣೆಗಳನ್ನೂ ಮೀರಿಸಿದೆ.
ಇದನ್ನೂ ಓದಿ: ಇಂಡಿಯನ್ ಮೈಕಲ್ ಜಾಕ್ಸನ್ ಸಿನಿಮಾದ ಸ್ಪೆಷಲ್ ಹಾಡಿಗೆ ಧ್ವನಿಯಾದ ವಿಜಯ್ ಸೇತುಪತಿ