ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಜೈಲರ್'. ರಜನಿ ನಟನೆಯ ಕೊನೆಯ ಎರಡು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಎಆರ್ ಮುರುಗದಾಸ್ ಅವರ 'ದರ್ಬಾರ್' ಮತ್ತು ಶಿವ ಅವರ 'ಅಣ್ಣಾತ್ತೆ' ಸಿನಿಮಾಗಳಿಂದ ನಿರಾಸೆಗೊಂಡಿರುವ ಅಭಿಮಾನಿಗಳು 'ಜೈಲರ್' ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಚಿತ್ರತಂಡ ಟ್ರೇಲರ್ ಬಿಡುಗಡೆಗೊಳಿಸಿದೆ.
- " class="align-text-top noRightClick twitterSection" data="">
ಟ್ರೇಲರ್ನಲ್ಲೇನಿದೆ..?: ಚಿತ್ರ ತಯಾರಕರು 'ಜೈಲರ್' ಟ್ರೇಲರ್ ಅನ್ನು 'ಶೋಕೇಸ್' ಅನ್ನೋ ಹೆಸರಿನಲ್ಲಿ ರಿಲೀಸ್ ಮಾಡಿದ್ದಾರೆ. ಇಡೀ ಟ್ರೇಲರ್ ಸಾಹಸ ದೃಶ್ಯದೊಂದಿಗೆ ಆಕರ್ಷಕವಾಗಿದೆ. ಇದನ್ನು ನೋಡಿದ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಎಂದಿನಂತೆ ರಜನಿಕಾಂತ್ ಅವರು ತಮ್ಮದೇ ಸ್ಟೈಲ್ನಲ್ಲಿ ಮನರಂಜಿಸಿದ್ದಾರೆ. ಟ್ರೇಲರ್ನಲ್ಲಿ ಬರುವ ಡೈಲಾಗ್ಗಳು ಕೂಡ ಅದ್ಭುತವಾಗಿದೆ. 'ಒಂದು ರೇಂಜ್ ನಂತರ ನಮ್ಮ ಬಳಿ ಮಾತಿಲ್ಲ, ಕಟ್ಸ್ ಮಾತ್ರ’ ಎನ್ನುವ ರಜನಿಕಾಂತ್ ಡೈಲಾಗ್ ಹೈಲೈಟ್ ಆಗಿದೆ.
ಮೊದಲು ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳುವ ರಜನಿ ನಂತರ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದಾರೆ. ರಜನಿ ಅವರ ಫೈಟಿಂಗ್ ಅಂತು ನೆಕ್ಸ್ಟ್ ಲೆವೆಲ್ನಲ್ಲಿದೆ. ಸಿನಿಮಾದ ದೃಶ್ಯಗಳಿಗೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದು ಚಿತ್ರದ ಟ್ರೇಲರ್ನ ಹೈಲೈಟ್ ಅಂತಾನೇ ಹೇಳಬಹುದು. ಟಾಲಿವುಡ್ ಕಾಮಿಡಿಯನ್ ಕಮ್ ವಿಲನ್ ಸುನಿಲ್ ಅವರನ್ನು ಒಂದು ಸೀನ್ನಲ್ಲಿ ಮಾತ್ರ ತೋರಿಸಿದ್ದಾರೆ.
ಇದನ್ನೂ ಓದಿ: ರಜನಿ, ಶಿವಣ್ಣನ 'ಜೈಲರ್' ಚಿತ್ರೀಕರಣ ಪೂರ್ಣ; ಆಗಸ್ಟ್ನಲ್ಲಿ ತೆರೆಗೆ
ಆದರೆ 'ಜೈಲರ್' ಟ್ರೇಲರ್ ಕನ್ನಡಿಗರಿಗೆ ಮಾತ್ರ ಬೇಸರ ತಂದಿದೆ. ಏಕೆಂದರೆ ರಜನಿ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಅವರು ನಟಿಸುತ್ತಿದ್ದಾರೆ. ಆದರೆ, ಒಂದು ಬಾರಿಯೂ ಶಿವಣ್ಣನನ್ನು ಟ್ರೇಲರ್ನಲ್ಲಿ ತೋರಿಸದೇ ಇರುವುದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಈ ಮೊದಲು ಬಿಡುಗಡೆಯಾದ ಗ್ಲಿಂಪ್ಸ್ನಲ್ಲಿ ಸಣ್ಣದಾಗಿ ಶಿವಣ್ಣನನ್ನು ತೋರಿಸಲಾಗಿತ್ತು. ಆದರೆ, ಇದೀಗ ಟ್ರೇಲರ್ನಲ್ಲಿ ಅವರನ್ನು ಒಂದು ಬಾರಿಯೂ ತೋರಿಸದೇ ಇರುವುದು ಕನ್ನಡಿಗರಿಗೆ ನೋವುಂಟು ಮಾಡಿದೆ.
ಚಿತ್ರತಂಡ ಹೀಗಿದೆ.. ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ಕಲಾನಿತಿ ಮಾರನ್ ಅವರು 200 ಕೋಟಿ ರೂ. ಬಜೆಟ್‌ನಲ್ಲಿ ಜೈಲರ್ ಅನ್ನು ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಮಾಲಿವುಡ್ ಸ್ಟಾರ್ ಮೋಹನ್‌ಲಾಲ್, ಜಾಕಿ ಶ್ರಾಫ್, ಶಿವ ರಾಜ್‌ಕುಮಾರ್, ರಮ್ಯಾ ಕೃಷ್ಣನ್ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೈಲರ್ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಸಿನಿಮಾ ಇದೇ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: Jaggesh: ರಜನಿ 'ಜೈಲರ್' ಜೊತೆ ಜಗ್ಗೇಶ್ 'ತೋತಾಪುರಿ 2' ಸಿನಿಮಾ ಬಿಡುಗಡೆ; ಯಾವಾಗ ಗೊತ್ತೇ?