ಹಿಂದಿಯ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಕಾಫಿ ವಿತ್ ಕರಣ್' ಸೀಸನ್ 8ರ ಎರಡನೇ ಸಂಚಿಕೆಯಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಪಾಲ್ಗೊಂಡಿದ್ದಾರೆ. ಪಾಪ್ಯುಲರ್ ಸೆಲೆಬ್ರಿಟಿ ಜೋಡಿ 'ದೀಪ್ವೀರ್' ಮೂಲಕ ಇತ್ತೀಚೆಗಷ್ಟೇ 8ನೇ ಸೀಸನ್ ಆರಂಭಗೊಂಡಿತ್ತು. ಪ್ರತೀ ಗುರುವಾರ ಹೊಸ ಎಪಿಸೋಡ್ಗಳನ್ನು ಹೊರಬಿಡಲಾಗುತ್ತದೆ. ಇದೀಗ ಲಭ್ಯವಿರುವ ಲೇಟೆಸ್ಟ್ ಸಂಚಿಕೆಯಲ್ಲಿ ಗದರ್ 2 ನಟ ಸನ್ನಿ ಡಿಯೋಲ್ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
ಸನ್ನಿ ಡಿಯೋಲ್ ಇತ್ತೀಚೆಗಷ್ಟೇ ತೆರೆಕಂಡು ಸೂಪರ್‌ಹಿಟ್ ಆಗಿರುವ ತಮ್ಮ ಗದರ್ 2 ಮತ್ತು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಓಎಂಜಿ 2ರ ಬಾಕ್ಸ್ ಆಫೀಸ್ ಫೈಟ್ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಎರಡು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೂ ಮೊದಲು ಅಕ್ಷಯ್ ಅವರೊಂದಿಗೆ ಮಾತುಕತೆ ನಡೆಸಿದ್ದೆ ಎಂದು ಸನ್ನಿ ತಿಳಿಸಿದರು. ಗಲ್ಲಾಪೆಟ್ಟಿಗೆ ಘರ್ಷಣೆ ತಪ್ಪಿಸಲು ಓಎಂಜಿ 2ರ ಬಿಡುಗಡೆ ದಿನಾಂಕವನ್ನು ಬದಲಾಯಿಸುವಂತೆ ಕೇಳಿಕೊಂಡಿದ್ದೆ. ಆದ್ರೆ ರಿಲೀಸ್ ಡೇಟ್ ಸಂಬಂಧ ಯಾವುದೇ ಅಡ್ಜೆಸ್ಟ್ಮೆಂಟ್ ಮಾಡಲು ಸದ್ಯ ಸಾಧ್ಯವಾಗದು ಎಂದು ಅಕ್ಷಯ್ ತಿಳಿಸಿದ್ದರು. ಅಂತಿಮವಾಗಿ ಸಿನಿಮಾ ಒಂದೇ ದಿನ ತೆರೆಕಂಡು ಗಲ್ಲಾಪೆಟ್ಟಿಗೆ ಘರ್ಷಣೆಗೆ ಕಾರಣವಾಯಿತು ಎಂದು ಹೇಳಿದರು.
ಕಾಫಿ ವಿತ್ ಕರಣ್ ಕಾರ್ಯಕ್ರಮದ ನಿರೂಪಕ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್, ಗದರ್ 2ರ ಅಭೂತಪೂರ್ವ ಯಶಸ್ಸಿಗಾಗಿ ಸನ್ನಿ ಡಿಯೋಲ್ ಅವರನ್ನು ಶ್ಲಾಘಿಸಿದರು. ಒಂದೇ ದಿನ (ಆಗಸ್ಟ್ 11) ಎರಡು ಸಿನಿಮಾಗಳು ಬಿಡುಗಡೆಯಾದ ಬಗ್ಗೆ ಸನ್ನಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸನ್ನಿ ಡಿಯೋಲ್, "ನನ್ನ ಚಿತ್ರ ಬಿಡುಗಡೆಯಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ನನ್ನ ಯಾವುದೇ ಯಶಸ್ವಿ ಸಿನಿಮಾಗಳಿಲ್ಲ. ಹಾಗಾಗಿ ನನ್ನ ಜೊತೆ ಬೇರೆ ಯಾರೂ (ಸಿನಿಮಾಗಳು) ಕೂಡ ಬರುವುದು ನನಗೆ ಇಷ್ಟ ಇರಲಿಲ್ಲ. ಆದ್ರೆ ನೀವು ಯಾರನ್ನೂ ಕೂಡ ತಡೆಯಲು ಸಾಧ್ಯವಿಲ್ಲ. ಇದು ನಿಮಗೆ ಖಂಡಿತವಾಗಿಯೂ ನೋವಾಗುತ್ತದೆ ಅಲ್ಲವೇ. ಆದ್ರೆ ಅದರ (ಬೇರೆ ಸಿನಿಮಾ) ಜೊತೆಯೇ ಹೋಗೋಣ ಎಂದುಕೊಂಡೆ. ಅಂತಿಮವಾಗಿ ಎರಡೂ ಚಿತ್ರಗಳು ಉತ್ತಮ ಪ್ರದರ್ಶನ ನೀಡಿದವು" ಎಂದು ತಿಳಿಸಿದರು.
ಬಾಕ್ಸ್ ಆಫೀಸ್ ಫೈಟ್ಗೆ ಸಂಬಂಧಿಸಿದಂತೆ ಅಕ್ಷಯ್ ಕುಮಾರ್ ಅವರೊಂದಿಗಿನ ಮಾತುಕತೆ ಬಗ್ಗೆ ಕೇಳಿದಾಗ, ಸನ್ನಿ ಪ್ರತಿಕ್ರಿಯಿಸಿ, ''ಅಕ್ಷಯ್ ಅವರೊಂದಿಗೆ ಮಾತನಾಡಿದೆ. ನಿಮಗೆ ರಿಲೀಸ್ ಡೇಟ್ ಚೇಂಜ್ ಮಾಡೋ ಪವರ್ ಇದ್ದರೆ ಮಾಡಿ ಎಂದು ವಿನಂತಿಸಿದೆ. ಆದರೆ ಅವರು ಇಲ್ಲ ಎಂದರು. ಸ್ಟುಡಿಯೋ ಸೇರಿದಂತೆ ಸಂಬಂಧಪಟ್ಟವರು ಇದನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು. ಎರಡು ಚಲನಚಿತ್ರಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಬಹುದು ಎಂದು ತಿಳಿಸಿದರು. ನಾನು, 'ಸರಿ, ಮುಂದುವರಿಯಿರಿ' ಎಂದೆ. ನಾನು ವಿನಂತಿಸಬಹುದು, ಇದಕ್ಕಿಂತ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ" ಎಂದು ಸನ್ನಿ ಹೇಳಿದರು.
ಇದನ್ನೂ ಓದಿ: ಕಾತರಕ್ಕೆ ಫುಲ್ಸ್ಟಾಪ್: ಶಾರುಖ್ ಖಾನ್ ಜನ್ಮದಿನಕ್ಕೆ 'ಡಂಕಿ' ಟೀಸರ್ ಗಿಫ್ಟ್
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯಂತೆ, ಇತಿಹಾಸದಲ್ಲೇ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಗದರ್ 2 ಹೊರ ಹೊಮ್ಮಿದೆ. ಬಿಡುಗಡೆಯಾದ ಮೊದಲ ದಿನದಲ್ಲಿ ಭಾರತದಲ್ಲಿ 40.1 ಕೋಟಿ ರೂ. ಗಳಿಸಿತ್ತು. ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟಾರೆ ಕಲೆಕ್ಷನ್ 525.7 ಕೋಟಿ ರೂ. ವಿಶ್ವಾದ್ಯಂತ 686 ಕೋಟಿ ರೂ. ಸಂಪಾದಿಸಿದೆ. ಮತ್ತೊಂದೆಡೆ, ಓಎಂಜಿ 2 ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 10.26 ಕೋಟಿ ರೂ. ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಭಾರತದಲ್ಲಿ ಒಟ್ಟು 151.16 ಕೋಟಿ ರೂ. ಸಂಗ್ರಹಿಸಿದೆ.
ಇದನ್ನೂ ಓದಿ: ಪತಿಯ ದೀರ್ಘಾಯುಷ್ಯಕ್ಕೆ ನಟಿಯರಿಂದ 'ಕರ್ವಾ ಚೌತ್' ಆಚರಣೆ: ಫೋಟೋಗಳು
ಅನಿಲ್ ಶರ್ಮಾ ನಿರ್ದೇಶನದ ಗದರ್ 2 ಸಿನಿಮಾ 2001ರ 'ಗದರ್: ಏಕ್ ಪ್ರೇಮ್ ಕಥಾ'ದ ಮುಂದುವರಿದ ಭಾಗ. ಆಗಸ್ಟ್ 11 ರಂದು ಚಿತ್ರ ಬಿಡುಗಡೆ ಆಯಿತು. ಸನ್ನಿ ಡಿಯೋಲ್ ಮತ್ತು ಅಮಿಶಾ ಪಟೇಲ್ ಜೋಡಿ ತಾರಾ ಸಿಂಗ್ ಮತ್ತು ಸಕೀನಾ ಅವರ ಪಾತ್ರಗಳನ್ನು ಪುನರಾವರ್ತಿಸಿದರು. ಅನಿಲ್ ಶರ್ಮಾ ಅವರ ಮಗ ಉತ್ಕರ್ಷ್ ಕೂಡ ಚಿತ್ರದಲ್ಲಿ ತಾರಾ ಮತ್ತು ಸಕೀನಾ ಅವರ ಪುತ್ರನಾಗಿ ಕಾಣಿಸಿಕೊಂಡಿದ್ದಾರೆ.