2022ರಲ್ಲಿ ಸೌತ್ ಸಿನಿಮಾಗಳ ಅಬ್ಬರ ಜೋರಾಗಿತ್ತು. ಅದರಲ್ಲೂ ಸ್ಯಾಂಡಲ್ವುಡ್ ವಿಶೇಷವಾಗಿ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆಯಿತು. ಆದ್ರೆ ಬಾಲಿವುಡ್ಗೆ ಮಾತ್ರ ಬಾಯ್ಕಾಟ್ ಬಿಸಿ ತಾಗಿತ್ತು. ಅನೇಕ ಸಿನಿಮಾಗಳು ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾದವು. ಬಾಯ್ಕಾಟ್ ಹೊಡೆತಕ್ಕೆ ನಲುಗಿದ್ದ ಬಾಲಿವುಡ್ ಚೇತರಿಕೆ ಕಾಣುತ್ತಿರುವ ಈ ಹೊತ್ತಿನಲ್ಲಿ ಬಹುನಿರೀಕ್ಷಿತ ಪಠಾಣ್ ಸಿನಿಮಾಗೆ ಬಾಯ್ಕಾಟ್ ಹೊಡೆತ ಬಿದ್ದಿದೆ. ಈ ಪರಿಸ್ಥಿತಿಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಬಾಲಿವುಡ್ ಸಿನಿಮಾ ಮೇಲಿನ ಬಾಯ್ಕಾಟ್ ಪ್ರವೃತ್ತಿ ತಡೆಯಲು ಕ್ರಮ ಕೈಗೊಳ್ಳಿ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಹಿಂದಿ ಚಿತ್ರರಂಗದ ಹಿರಿಯ ನಟ ಸುನೀಲ್ ಶೆಟ್ಟಿ ಮನವಿ ಮಾಡಿದ್ದಾರೆ.
ನಟ ಸುನೀಲ್ ಶೆಟ್ಟಿ ಮನವಿ?: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎರಡು ದಿನಗಳ ಭೇಟಿಗಾಗಿ ಗುರುವಾರ ಮುಂಬೈಗೆ ತಲುಪಿದ್ದಾರೆ. ಇಲ್ಲಿ ಅವರು ಅನೇಕ ದೊಡ್ಡ ಬಾಲಿವುಡ್ ನಟರು, ನಿರ್ದೇಶಕರು ಸೇರಿದಂತೆ ದೊಡ್ಡ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಹಿರಿಯ ನಟ ಸುನೀಲ್ ಶೆಟ್ಟಿ ಸಿಎಂ ಯೋಗಿ ಅವರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಬಾಲಿವುಡ್ ಬಹಿಷ್ಕಾರವನ್ನು ತಡೆಯಲು ಸಹಾಯ ಮಾಡುವಂತೆ ಯೋಗಿ ಅವರಲ್ಲಿ ನಟ ಸುನೀಲ್ ಕೇಳಿಕೊಂಡರು. ಇದರೊಂದಿಗೆ ಬಾಲಿವುಡ್ ನಟರು ಡ್ರಗ್ಸ್ ಸೇವಿಸುವುದಿಲ್ಲ ಎಂದೂ ಕೂಡ ಹೇಳಿದ್ದಾರೆ.
ಮನೋರಂಜನಾ ಕ್ಷೇತ್ರ ಸಂಬಂಧ ಸಭೆ: ವಾಸ್ತವವಾಗಿ ಸಿನಿಮಾ ಶೂಟಿಂಗ್ ಮತ್ತು ರಾಜ್ಯದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಬಾಲಿವುಡ್ ತಾರೆಯರು, ನಿರ್ದೇಶಕರು ಮತ್ತು ದೊಡ್ಡ ಉದ್ಯಮಿಗಳೊಂದಿಗೆ ಸಿಎಂ ಯೋಗಿ ಅವರು ಗುರುವಾರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಬಾಲಿವುಡ್ ತಾರೆಯರಾದ ಸುನೀಲ್ ಶೆಟ್ಟಿ, ಬೋನಿ ಕಪೂರ್, ಜಾಕಿ ಶ್ರಾಫ್, ರಾಜ್ಕುಮಾರ್ ಸಂತೋಷಿ ಮತ್ತಿತರರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ನಟರು ಚಿತ್ರರಂಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಿಎಂ ಮುಂದೆ ಇಟ್ಟರು. ಈ ವೇಳೆಯೇ ಸುನೀಲ್ ಶೆಟ್ಟಿ ತಮ್ಮ ಮನವಿ ಸಲ್ಲಿಸಿದರು.
ನಾವು ಡ್ರಗ್ಸ್ ಸೇವಿಸುವುದಿಲ್ಲ: ಶೇ. 99 ರಷ್ಟು ಬಾಲಿವುಡ್ ಮಂದಿ ಡ್ರಗ್ಸ್ ಸೇವಿಸುವುದಿಲ್ಲ. ಪ್ರೇಕ್ಷಕರನ್ನು ತಲುಪಲು ನಾವು ಶ್ರಮಿಸುತ್ತಿದ್ದೇವೆ. ಹೀಗಿರುವಾಗ ಬಾಲಿವುಡ್ ಬಾಯ್ಕಾಟ್ ಎಂಬ ಹ್ಯಾಷ್ ಟ್ಯಾಗ್ ನಮ್ಮ ಚಿತ್ರರಂಗದ ಇಮೇಜ್ಗೆ ಧಕ್ಕೆ ತರುತ್ತಿದೆ ಎಂದು ತಮ್ಮ ಸಮಸ್ಯೆ ತೋಡಿಕೊಂಡರು. ಇನ್ನೂ ಬಾಲಿವುಡ್ ಬಾಯ್ಕಾಟ್ ಎಂಬ ಹ್ಯಾಶ್‌ಟ್ಯಾಗ್ ತೆಗೆದುಹಾಕುವುದು ಅನಿವಾರ್ಯ ಆಗಿದೆ. ಈ ಸಮಸ್ಯೆಯನ್ನು ಸರಿ ಪಡಿಸಲು ನಮಗೆ ಸಹಾಯ ಮಾಡಿ. ಹಾಗಾದರೆ ಮಾತ್ರ ಬಾಲಿವುಡ್‌ನ ಹಾಳಾದ ಇಮೇಜ್ ಮತ್ತೆ ಉತ್ತಮವಾಗಬಹುದು. ನೀವು ಏನಾದರು ಹೇಳಿದರೆ ಇದೆಲ್ಲ ನಿಲ್ಲಬಹುದು ಎಂದು ಸಿಎಂ ಯೋಗಿ ಅವರಲ್ಲಿ ನಟ ಸುನೀಲ್ ಶೆಟ್ಟಿ ಹೇಳಿದರು.
ಈ ಸಂದೇಶವನ್ನು ಪ್ರಧಾನಿಯವರಿಗೆ ತಲುಪಿಸಿ: ಇದಕ್ಕೆ ಒಂದು ಉದಾಹರಣೆ ನೀಡಿದ ಸುನೀಲ್ ಶೆಟ್ಟಿ, 'ಬುಟ್ಟಿಯಲ್ಲಿರುವ ಒಂದು ಸೇಬು ಕೆಟ್ಟದಾಗಿರಬಹುದು, ಆದರೆ ಎಲ್ಲಾ ಸೇಬುಗಳು ಕೆಟ್ಟವಲ್ಲ. ಹಾಗೆಯೇ ನಾವೆಲ್ಲ ಕೆಟ್ಟವರಲ್ಲ. ನಮ್ಮ ಪ್ರಪಂಚವು ಕಥೆ ಮತ್ತು ಸಂಗೀತದಿಂದ ಕೂಡಿದೆ. ಹಾಗಾಗಿ ನಮ್ಮ ಈ ಸಮಸ್ಯೆ ದೂರವಾಗಬೇಕು. ದಯವಿಟ್ಟು ಈ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿಯ ಅವರಿಗೆ ತಿಳಿಸಿ ಎಂದು ಕೇಳಿಕೊಂಡರು.
ಇದನ್ನೂ ಓದಿ: ಸ್ಯಾಂಡಲ್ವುಡ್ ಸಿನಿ ಸುಗ್ಗಿ: 8 ಸಿನಿಮಾಗಳು ತೆರೆಗೆ-ಬಾಕ್ಸ್ ಆಫೀಸ್ನಲ್ಲಿ ಯಾರಿಗೆ 'ಶುಕ್ರ'ದೆಸೆ?