ಹಾಲಿವುಡ್ನಲ್ಲಿ 'ಮಾಸ್ಟರ್ ಆಫ್ ಸ್ಟೋರಿ ಟೇಲಿಂಗ್' ಎಂದೇ ಖ್ಯಾತರಾಗಿರುವ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ (Steven Spielberg) ಅವರನ್ನು ಭಾರತದ ಶ್ರೇಷ್ಠ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಸಂದರ್ಶನ ಮಾಡಿದ್ದಾರೆ. ಸಂದರ್ಶನನ ವೇಳೆ ಸ್ಟೀವನ್ ಸ್ಪೀಲ್‌ಬರ್ಗ್ ಅವರು ರಾಜಮೌಳಿಯವರ ಬಗ್ಗೆ ಗುಣಗಾನ ಮಾಡಿದ್ದಾರೆ. ಅವರ ಮೆಚ್ಚುಗೆಗೆ ರಾಜಮೌಳಿಯವರು ಬಹಳ ಖುಷಿಪಟ್ಟಿದ್ದಾರೆ. ಕುರ್ಚಿಯಿಂದ ಎದ್ದು ಕುಣಿಯಬೇಕು ಎಂದುಕೊಂಡಿದ್ದೇನೆ ಎನ್ನುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರ 'ದಿ ಫೇಬಲ್‌ಮ್ಯಾನ್ಸ್' (The Fabelmans) ಚಿತ್ರ ಅತ್ಯುತ್ತಮ ಚಿತ್ರವಾಗಿ ಆಸ್ಕರ್ಗೆ ನಾಮನಿರ್ದೇಶನಗೊಂಡಿದೆ. ಈ ಚಿತ್ರ ಭಾರತದಲ್ಲಿ ಶುಕ್ರವಾರ ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಟೀವನ್ ಸ್ಪೀಲ್‌ಬರ್ಗ್ ಹಾಗೂ ರಾಜಮೌಳಿ ಆನ್ಲೈನ್ (ಝೂಮ್ ಕಾಲ್) ಮಾತುಕತೆ ನಡೆಸಿದ್ದಾರೆ. ಒಂದು ರೀತಿಯಲ್ಲಿ ಸಂದರ್ಶನವೇ ನಡೆದಿದೆ. ಈ ವೇಳೆ, 1976ರಲ್ಲಿ ತೆರೆಕಂಡ ‘ಕ್ಲೋಸ್ ಎನ್‌ಕೌಂಟರ್ಸ್ ಆಫ್ ದ ಥರ್ಡ್ ಕೈಂಡ್’ ಸಿನಿಮಾದ ಶೂಟಿಂಗ್‌ಗಾಗಿ ಭಾರತಕ್ಕೆ ಬಂದಿದ್ದನ್ನು ಸ್ಪೀಲ್‌ಬರ್ಗ್ ನೆನಪಿಸಿಕೊಂಡರು. ಮುಂಬೈನಲ್ಲಿ ಚಿತ್ರೀಕರಣ ನಡೆಸಿದ್ದೆ ಎಂದು ಕೂಡ ತಿಳಿಸಿದರು. ಸ್ಟೀವನ್ ಸ್ಪೀಲ್‌ಬರ್ಗ್ ಅವರೊಂದಿಗೆ ಮಾತನಾಡುವುದೇ ಒಂದು ಗೌರವ ಎಂದು ರಾಜಮೌಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿಮ್ಮ 'ಆರ್‌ಆರ್‌ಆರ್' ಸಿನಿಮಾ ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ಚಿತ್ರವನ್ನು ವೀಕ್ಷಿಸುವಾಗ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಇದರಲ್ಲಿನ ಪ್ರತಿಯೊಂದು ಪಾತ್ರವೂ ವಿಶಿಷ್ಟವಾಗಿದೆ. ಪ್ರತೀ ದೃಶ್ಯ ಮತ್ತು ಚಿತ್ರೀಕರಣ ಅದ್ಭುತವಾಗಿದೆ ಎಂದು ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರು ಆರ್‌ಆರ್‌ಆರ್ ಬಗ್ಗೆ ಗುಣಗಾನ ಮಾಡಿದರು.
- " class="align-text-top noRightClick twitterSection" data="
">
ಈ ಮೆಚ್ಚುಗೆಗೆ ಪ್ರತಿಕ್ರಿಯಿಸಿದ ನಿರ್ದೇಶಕ ರಾಜಮೌಳಿ ಅವರು, ಧನ್ಯವಾದಗಳು ಸರ್. ನೀವು ನಮ್ಮ ಚಿತ್ರವನ್ನು ನೋಡಿದ್ದಕ್ಕೆ ನಮಗೆ ಬಹಳ ಸಂತೋಷ ಆಗಿದೆ. ನಿಮ್ಮ ಹೊಗಳಿಕೆ ನನ್ನನ್ನು ಕುರ್ಚಿಯಿಂದ ಎದ್ದು ಕುಣಿಯುವಂತೆ ಮಾಡುತ್ತಿದೆ ಎಂದು ತಿಳಿಸಿದರು. ಇನ್ನು, ನಿಮ್ಮ ಹಿಂದಿನ ಎಲ್ಲಾ ಚಿತ್ರಗಳಿಗಿಂತ 'ದಿ ಫೇಬಲ್‌ಮ್ಯಾನ್ಸ್' ವಿಭಿನ್ನವಾಗಿದೆ ಎಂದು ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಸಿನಿಮಾ ಬಗ್ಗೆ ರಾಜಮೌಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಾಗಲೇ ಇತರರ ಕಥೆಯನ್ನು ಬಹಳಷ್ಟು ಹೇಳಿದ್ದೇನೆ. 'ನನ್ನ ಬಗ್ಗೆ ಹೇಳಬೇಕು' ಎಂಬ ಕಲ್ಪನೆಯ ಭಾಗವಾಗಿ 'ದಿ ಫೇಬಲ್‌ಮ್ಯಾನ್ಸ್' ಚಿತ್ರ ಮೂಡಿ ಬಂದಿದೆ. ನನ್ನ ಹೆತ್ತವರು, ಸಹೋದರಿಯರು ಮತ್ತು ಬೆಳೆಯುತ್ತಿರುವಾಗ ನಾನು ಎದುರಿಸಿದ ಎಲ್ಲದರ ಬಗ್ಗೆ ಹೇಳಲು ನಾನು ಬಯಸಿದೆ. ನನ್ನ ತಾಯಿ ಬಹಳ ಉನ್ನತ ವ್ಯಕ್ತಿತ್ವದವರು. ನಾನು ಅವರ ಬಗ್ಗೆ ಹೆಚ್ಚು ಪ್ರಸ್ತಾಪಿಸಿದ್ದೇನೆ ಎಂದು ತಮ್ಮ ಚಿತ್ರದ ಬಗ್ಗೆ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ತಿಳಿಸಿದರು. 'ದಿ ಫೇಬಲ್‌ಮ್ಯಾನ್ಸ್' ಸೀಕ್ವೆಲ್ ಬರಲಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದ್ಯಕ್ಕೆ ಯಾವುದೇ ಯೋಚನೆ ಇಲ್ಲ ಎಂದು ತಿಳಿಸಿದರು.
"ನಾನು ಚಲನಚಿತ್ರವನ್ನು ನೋಡುತ್ತಿರುವಾಗ ( 'ದಿ ಫೇಬಲ್‌ಮ್ಯಾನ್ಸ್') ಆರಂಭದಲ್ಲಿ ಆಶ್ಚರ್ಯವಾಯಿತು. ಸ್ವಂತ ತಾಯಿ ಅಷ್ಟೊಂದು ಒಳ್ಳೆಯವರಲ್ಲ ಎಂಬಂತೆ ಚಿತ್ರಿಕರಿಸಿದ್ದಾರೆ ಎನಿಸಿತು. ಆದರೆ ನಾವು ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು, ಯಾರೂ ಕೆಟ್ಟವರಲ್ಲ. ಒಬ್ಬ ವ್ಯಕ್ತಿ ಒಳ್ಳೆಯವ ಅಥವಾ ಕೆಟ್ಟವನಾಗಿರುವುದಿಲ್ಲ. ಈ ಕಥೆ ನಿಮ್ಮ ಹೃದಯವನ್ನು ಮತ್ತು ನಿಮ್ಮ ಕರ್ತವ್ಯವನ್ನು ಅನುಸರಿಸುವುದಾಗಿದೆ'' ಎಂದು ರಾಜಮೌಳಿ ತಿಳಿಸಿದ್ದಾರೆ.
ಈ ಕಥೆಯಲ್ಲಿ ಯಾವುದೇ ಖಳನಾಯಕ ಇಲ್ಲ. ಇದು ಪ್ರೀತಿಯ ಕುರಿತಾದ ಕಥೆ. ಇದು ನನ್ನನ್ನೇ ಹೋಲುವ ಚಿಕ್ಕ ಹುಡುಗನ ಕಥೆ. ಆತ ಮೂವಿ ಕ್ಯಾಮರಾಗಳನ್ನು ಪ್ರೀತಿಸುತ್ತಾನೆ ಮತ್ತು ತನ್ನ ನೆರೆಹೊರೆಯ ಸ್ನೇಹಿತರೊಂದಿಗೆ ಸೇರಿ ಚಲನಚಿತ್ರಗಳನ್ನು ಮಾಡುತ್ತಾನೆ. ಇದು ಅಂತಿಮವಾಗಿ ಆತನನ್ನು ವೃತ್ತಿಜೀವನಕ್ಕೆ ಕೊಂಡೊಯ್ಯುತ್ತದೆ ಎಂದು ಸ್ಪೀಲ್‌ಬರ್ಗ್ ಹೇಳಿದ್ದಾರೆ.
ಇದನ್ನೂ ಓದಿ: 'ಗೋಲ್ಡನ್ ಗ್ಲೋಬ್ಸ್'ನಲ್ಲಿ ನಾನು ದೇವರನ್ನು ಭೇಟಿಯಾದೆ: ನಿರ್ದೇಶಕ ರಾಜಮೌಳಿ
ಯುವ ಚಿತ್ರ ನಿರ್ಮಾಪಕರಿಗೆ ನೀವು ಏನು ಸಲಹೆ ನೀಡುತ್ತೀರಿ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಪೀಲ್‌ಬರ್ಗ್, ಸದ್ಯ ಫೋನ್‌ನಲ್ಲಿಯೇ ಚಲನಚಿತ್ರಗಳನ್ನು ಚಿತ್ರೀಕರಿಸುವ ತಂತ್ರಜ್ಞಾನ ಲಭ್ಯವಿದೆ. ಯುವ ಚಲನಚಿತ್ರ ನಿರ್ಮಾಪಕರು ತಮ್ಮನ್ನು ತಾವು ಸಾಬೀತುಪಡಿಸಲು ಬಜೆಟ್ ಮತ್ತು ಶೂಟಿಂಗ್ ವೇಳಾಪಟ್ಟಿಗಳ ಬಗ್ಗೆ ಸ್ಪಷ್ಟವಾಗಿರಬೇಕು. ಅನುಭವಿಗಳು ಏನು ಹೇಳುತ್ತಾರೆಂದು ಗಮನಿಸಬೇಕು. ಕಡಿಮೆ ಮಾತನಾಡಿ, ಹೆಚ್ಚು ಆಲಿಸಿ. ಸಿನಿಮಾ ಒಂದು ಸಾಮೂಹಿಕ ಪ್ರಯತ್ನ ಎಂದು ಸಲಹೆ ನೀಡಿದರು.
ಕೆಲ ದಿನಗಳ ಹಿಂದೆ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ನಿರ್ದೇಶಕ ರಾಜಮೌಳಿ 'ಗೋಲ್ಡನ್ ಗ್ಲೋಬ್ ಅವಾರ್ಡ್'ನಲ್ಲಿ ಭೇಟಿಯಾಗಿದ್ದರು. ಆ ಫೋಟೋವನ್ನು ಹಂಚಿಕೊಂಡು, 'ನಾನು ದೇವರನ್ನು ಭೇಟಿಯಾದೆ' ಎಂದು ಬರೆದುಕೊಂಡಿದ್ದರು.