ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಪಠಾಣ್ ರಷ್ಯಾ ಮತ್ತು ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್) ನಲ್ಲಿ ಬಿಡುಗಡೆಯಾಗಲಿದೆ. ಜನವರಿ 25 ರಂದು ಬಿಡುಗಡೆಯಾಗಿ ಭಾರತೀಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಇದು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ರೂ.ಗೂ ಹೆಚ್ಚು ಗಳಿಸಿದ ಸೂಪರ್ ಹಿಟ್ ಸಿನಿಮಾವಾಗಿದೆ.
ಪಠಾಣ್ನ ಡಬ್ಬಿಂಗ್ ಆವೃತ್ತಿಯು ರಷ್ಯಾ ಮತ್ತು ಸಿಐಎಸ್ ದೇಶಗಳಾದ್ಯಂತ 3000 ಕ್ಕಿಂತಲೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಮೇ ತಿಂಗಳಲ್ಲಿ ಪಠಾಣ್ ಬಾಂಗ್ಲಾದೇಶದಲ್ಲಿ ಬಿಡುಗಡೆಯಾಯಿತು. ಎಸ್‌ಆರ್‌ಕೆ ಮತ್ತು ದೀಪಿಕಾ ಅಭಿನಯದ ಚಿತ್ರವು 1971 ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಚಲನಚಿತ್ರವಾಗಿದೆ.
"@yrf ನ ಐತಿಹಾಸಿಕ ಬ್ಲಾಕ್‌ಬಸ್ಟರ್ #ಪಠಾಣ್ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದೆ. ಭಾರತದ ಚಲನಚಿತ್ರ ರಷ್ಯಾ ಮತ್ತು ಸಿಐಎಸ್‌ನಾದ್ಯಂತ ಡಬ್ಬಿಂಗ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ." ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಸಿಐಎಸ್ ದೇಶಗಳಲ್ಲಿ ಅರ್ಮೇನಿಯಾ, ಅಜೆರ್ಬೈಜಾನ್, ಬೆಲಾರಸ್, ಜಾರ್ಜಿಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸೇರಿವೆ.
ಇದನ್ನೂ ಓದಿ: 'ನಾನು ಸೀತೆಯ ಪಾತ್ರ ಮಾಡಿದಾಗ ಸೀತೆಯಂತೆ ಬದುಕಿದ್ದೆ, ಇಂದಿನ ಕಲಾವಿದರಿಗೆ ಅದು ಕೇವಲ ಪಾತ್ರ': ದೀಪಿಕಾ ಚಿಖ್ಲಿಯಾ
ಪಠಾಣ್ ಜನವರಿ 25ರಂದು ಬಿಡುಗಡೆ ಆಗಿತ್ತು. ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಸೇರಿದಂತೆ ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿರುವ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದೆ. ಡಿಸೆಂಬರ್ 2ನೇ ವಾರದಲ್ಲಿ ಬೇಶರಂ ರಂಗ್ ಹಾಡು ಬಿಡುಗಡೆ ಆಗಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.
ನಟಿ ದೀಪಿಕಾ ಪಡುಕೋಣೆ ಅವರ ಕೇಸರಿ ಬಿಕಿನಿ ವಸ್ತ್ರ ವಿವಾದಕ್ಕೆ ಒಳಗಾಗಿತ್ತು. ಪರ-ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿ ಮಾಡಿಕೊಟ್ಟಿತ್ತು. ಸಿನಿಮಾ ಮೇಲೆ ಬಹಿಷ್ಕಾರದ ಎಚ್ಚರಿಕೆ ಇತ್ತು. ಆದರೂ ಚಿತ್ರತಂಡ ಮೌನವಾಗಿ, ಆತ್ಮವಿಶ್ವಾಸದಲ್ಲಿ ಮುನ್ನುಗ್ಗಿತು. ಸಿನಿಮಾ ಬಿಡುಗಡೆ ಆಗಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತು. ಒಂದೇ ತಿಂಗಳೊಳಗೆ ಒಂದು ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿತ್ತು.
ಶಾರುಖ್ ಅಭಿನಯದ ಜವಾನ್ ಸಿನಿಮಾ ಈ ಸಾಲಿನಲ್ಲೇ ಬಿಡುಗಡೆ ಆಗಲಿದ್ದು, ಈ ಚಿತ್ರದ ಮೇಲೂ ಭಾರಿ ನಿರೀಕ್ಷೆ ಇದೆ. ಈ ವರ್ಷದ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜವಾನ್ ಚಿತ್ರವನ್ನು ಶಾರುಖ್ ಖಾನ್ರವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ನಿರ್ಮಿಸುತ್ತಿದೆ. ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ಸೆಪ್ಟೆಂಬರ್ 7ರಂದು ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಗೊಳ್ಳಲಿದೆ.