ಪ್ರೀಮಿಯರ್ ಪದ್ಮಿನಿ ಖ್ಯಾತಿಯ ನಟ ವಿವೇಕ್ ಸಿಂಹ ಹಾಗೂ ದಿಯಾ ಜನಪ್ರಿಯತೆಯ ಖುಷಿ ರವಿ ಮುಖ್ಯಭೂಮಿಕೆಯ ಸ್ಪೂಕಿ ಕಾಲೇಜ್ ಸಿನಿಮಾದ ಟ್ರೈಲರ್ ಅನಾವರಣವಾಗಿದೆ. ಇದೊಂದು ಸಸ್ಪೆನ್ಸ್, ಹಾರರ್ ಕಥೆ ಹೊಂದಿರುವ ಸಿನಿಮಾ ಅನ್ನೋದು ಟ್ರೈಲರ್‌ನಿಂದ ಗೊತ್ತಾಗುತ್ತದೆ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರತಂಡದವರು ಮಾಧ್ಯಮಗೋಷ್ಟಿ ನಡೆಸಿ ವಿವರ ನೀಡಿದರು.
ನಟಿ ಖುಷಿ ರವಿ ಮಾತನಾಡಿ, 'ವಿವೇಕ್ ಸಿಂಹ ಹಾಗೂ ನಾನು ಕಾಲೇಜು ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದೇವೆ. ಚಿತ್ರದಲ್ಲಿ ನನ್ನದು ಹೆದರಿಸುವ ಪಾತ್ರ' ಎಂದರು. 'ನಾನು ಹೀರೋ ಆಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದು. ಇದಕ್ಕೆ ಕಾರಣ ನಿರ್ಮಾಪಕ ಪ್ರಕಾಶ್ ಹಾಗೂ ನಿರ್ದೇಶಕ ಭರತ್ ಜಿ' ಎಂದು ನಟ ವಿವೇಕ್ ಸಿಂಹ ತಿಳಿಸಿದರು.
ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳನ್ನು ನಿರ್ಮಿಸಿದ್ದ ಹೆಚ್.ಕೆ.ಪ್ರಕಾಶ್ ಚಿತ್ರ ನಿರ್ಮಿಸಿದ್ದಾರೆ. 'ಸಿನಿಮಾ ಮಾಡಿರುವ ಬಗ್ಗೆ ಖುಷಿ ಇದೆ. ಲಾಕ್ಡೌನ್ ಸಮಯದಲ್ಲಿ ಚಿತ್ರೀಕರಣ ಮಾಡಿದ್ದೆವು' ಎಂದರು.
- " class="align-text-top noRightClick twitterSection" data="">
ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಭರತ್ ಸಿನಿಮಾ ನಿರ್ದೇಶಿಸಿದ್ದಾರೆ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ ಕಾಮಿಡಿ ಕಿಲಾಡಿಗಳು ಶೋನ ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕಿದೆ. ಧಾರವಾಡದ ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಕಾಲೇಜು ಹಾಗೂ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ.
ಮೆಲ್ಲುಸಿರೆ ಸವಿಗಾನ...: ಬಿಡುಗಡೆಗೆ ಸಜ್ಜಾಗಿರುವ 'ಸ್ಪೂಕಿ ಕಾಲೇಜು' ಸಿನಿಮದಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ ಜನಪ್ರಿಯ ಹಾಡು 'ಮೆಲ್ಲುಸಿರೆ ಸವಿಗಾನ'ವನ್ನು ಬಳಸಿಕೊಳ್ಳಲಾಗಿದೆ. ದಾಂಡೇಲಿ ದಟ್ಟ ಕಾಡಿನಲ್ಲಿ 250ಕ್ಕೂ ಅಧಿಕ ತಂತ್ರಜ್ಞರ ಸಹಾಯದಿಂದ ಅದ್ಭುತ ಸೆಟ್ನಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಕ್ಯಾಮರಾಮ್ಯಾನ್ ಮನೋಹರ್ ಜೋಷಿ ಸ್ಪೆಷಲ್ ಸಾಂಗ್ ಸೀನ್ಗಳನ್ನು ಸೆರೆ ಹಿಡಿದಿದ್ದಾರೆ. ನೃತ್ಯ ನಿರ್ದೇಶಕ ಭೂಷಣ್ ಕೋರಿಯೋಗ್ರಫಿ ಮಾಡಿದ್ದಾರೆ. ಏಕ್ ಲವ್ ಯಾ ಸಿನಿಮಾ ಸುಂದರಿ ರೀಷ್ಮಾ ನಾಣಯ್ಯ ನಾಲ್ಕೈದು ಕಾಸ್ಟ್ಯೂಮ್ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಸೊಂಟ ಬಳುಕಿಸಿದ್ದಾರೆ.
ಸ್ಪೂಕಿ ಅಂದ್ರೆ ಭಯ: ಅಂದಹಾಗೆ, ಸ್ಪೂಕಿ ಅಂದ್ರೆ ಭಯ. ಭಯದ ವಾತಾವರಣದಲ್ಲಿ ಅನೇಕ ತರಹದ ತಿರುವುಗಳಿವೆ. ಬೆಚ್ಚಿ ಬೀಳಿಸುವ ಸನ್ನಿವೇಶಗಳಿವೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್, ಟ್ರೈಲರ್ ಇದರ ಸುಳಿವು ನೀಡಿದೆ.
ಇದನ್ನೂ ಓದಿ: ಬೇಶರಂ ರಂಗ್ ಹಾಡಿನಲ್ಲಿ ಬದಲಾವಣೆ ಮಾಡಲು ಚಿತ್ರತಂಡಕ್ಕೆ ಸಿಬಿಎಫ್‌ಸಿ ಸೂಚನೆ
ಆರ್ಜೆ ಆಗಿ ಹಾಗು ಮಾರ್ಕೆಟಿಂಗ್ ವಿಭಾಗದಲ್ಲಿ ಅನುಭವ ಪಡೆದಿರುವ ಭರತ್ ಸಿನಿಮಾದ ಸೂತ್ರಧಾರ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಹಾರರ್ ಕಥೆ ಆಯ್ಕೆ ಮಾಡಿಕೊಂಡಿರುವ ಇವರಿಗೆ ಹಿಂದೆ ಅನೇಕ ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅನುಭವವಿದೆ.