ರಾಯ್‌ಗಢ (ಛತ್ತೀಸ್‌ಗಢ): ಯುವ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ನಟಿಯ ಅಭಿಮಾನಿಗಳು ಈ ಪ್ರಕರಣದಿಂದ ಆಘಾತಕ್ಕೊಳಗಾಗಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ತಾರಾ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಛತ್ತೀಸ್‌ಗಢದ ರಾಯ್‌ಗಢ್ ಜಿಲ್ಲೆಯಲ್ಲಿ 22 ವರ್ಷದ ಸೋಷಿಯಲ್ ಮೀಡಿಯಾ ತಾರೆಯೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಲೀನಾ ನಾಗವಂಶಿ ಆತ್ಮಹತ್ಯೆ: "22 ವರ್ಷದ ಸೋಷಿಯಲ್ ಮೀಡಿಯಾ ಪ್ರಭಾವಿ ತಾರೆ ಲೀನಾ ನಾಗವಂಶಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಚಕ್ರಧರ್ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಇಂಗೇಶ್ವರ್ ಯಾದವ್ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾ ಸ್ಟಾರ್ ಲೀನಾ ನಾಗವಂಶಿ: ಲೀನಾ ನಾಗವಂಶಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ರಾಯ್ಗಢದ ಕೆಲೋ ವಿಹಾರ್ ಕಾಲೋನಿಯಲ್ಲಿ ವಾಸವಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ಇನ್ಸ್ಟಾಗ್ರಾಮ್ನಲ್ಲಿ 10,000 ಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದರು. ಕಿರು ವೀಡಿಯೋಗಳು ಮತ್ತು ರೀಲ್‌ಗಳನ್ನು ಹಂಚಿಕೊಳ್ಳುವುದರ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯ ಮತ್ತು ಜನಪ್ರಿಯರಾಗಿದ್ದರು.
ಡಿಸೆಂಬರ್ 25 ರಂದು ಲೀನಾ ಇನ್ಸ್ಟಾಗ್ರಾಮ್ನಲ್ಲಿ ಕ್ರಿಸ್ಮಸ್ ರೀಲ್ ಅನ್ನು ಸಹ ಅಪ್ಲೋಡ್ ಮಾಡಿದ್ದರು. ಆದರೆ ಇಂದು ಅವರು ನಮ್ಮೊಂದಿಗಿಲ್ಲ ಅನ್ನೋದು ಆಘಾತಕಾರಿ ಸಂಗತಿ. ವಿಷಯ ಕೇಳಿದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.
ಮನೆಗೆ ವಾಪಸಾದ ತಾಯಿಗೆ ಆಘಾತ: ಚಕ್ರಧರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಪೊಲೀಸರ ಪ್ರಕಾರ, ಮಾರುಕಟ್ಟೆಯಿಂದ ಮನೆಗೆ ಹಿಂದಿರುಗಿದ ತಾಯಿಗೆ ಲೀನಾ ಅವರು ಶವವಾಗಿ ಕಂಡುಬಂದಿದ್ದಾರೆ. ಮನೆಯಲ್ಲಿ ಲೀನಾ ಒಬ್ಬರೇ ಇದ್ದರು ಎನ್ನಲಾಗಿದೆ.
ಪೊಲೀಸ್ ಮಾಹಿತಿ: ತಾಯಿ ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಲೀನಾ ಕೋಣೆಯಲ್ಲಿ ಇರಲಿಲ್ಲ. ಅವರ ತಾಯಿ ಮನೆಯನ್ನು ಪರಿಶೀಲಿಸಿದಾಗ ಲೀನಾ ಪತ್ತೆಯಾಗಿಲ್ಲ. ಟೆರೆಸ್‌ಗೆ ಹೋಗಲು ನೋಡಿದರು, ಆದರೆ ಬಾಗಿಲು ಲಾಕ್ ಆಗಿತ್ತು. ಹೇಗೋ ಅವರು ಬಾಗಿಲು ತೆರೆದು ಮುಂದೆ ಹೆಜ್ಜೆಯಿಟ್ಟಾಗ, ಮಗಳು ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೀನಾ ನಾಗವಂಶಿ ಮರಣೋತ್ತರ ಪರೀಕ್ಷೆ: ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಪೊಲೀಸರಿಗೆ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ಸಬ್ ಇನ್ಸ್‌ಪೆಕ್ಟರ್ ಇಂಗೇಶ್ವರ್ ಯಾದವ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮೃತರ ಮೊಬೈಲ್ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂಪೂರ್ಣ ತನಿಖೆಯ ನಂತರವಷ್ಟೇ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ಡಿಸೆಂಬರ್ 24 ರಂದು ನಟಿ ತುನಿಶಾ ಶರ್ಮಾ ಅವರು ಮುಂಬೈನಲ್ಲಿ ನಡೆಯುತ್ತಿರುವ ಟಿವಿ ಶೋ ಅಲಿಬಾಬಾ- ದಸ್ತಾನ್-ಇ-ಕಾಬೂಲ್‌ನ ಸೆಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಒಂದು ದಿನದ ನಂತರ ಅವರ ಮಾಜಿ ಗೆಳೆಯ ಮತ್ತು ಕಾರ್ಯಕ್ರಮದ ಸಹ ನಟ ಶೀಜಾನ್ ಖಾನ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆಯ ಆರೋಪದ ಮೇಲೆ ಬಂಧಿಸಲಾಯಿತು. ಪೊಲೀಸರ ಪ್ರಕಾರ ತುನೀಶಾ ಮತ್ತು ಶೀಜಾನ್ ಸಂಬಂಧ ಹೊಂದಿದ್ದರು ಮತ್ತು 15 ದಿನಗಳ ಹಿಂದೆ ಬೇರ್ಪಟ್ಟಿದ್ದರು. ಈ ಘಟನೆ ನೋವು ಮಾಸುವ ಮುನ್ನವೇ ಸೋಶಿಯಲ್ ಮೀಡಿಯಾ ಸ್ಟಾರ್ ಲೀನಾ ನಾಗವಂಶಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದು ನೆಟ್ಟಿಗರಿಗೆ ಶಾಕ್ ನೀಡಿದೆ.
ಇದನ್ನೂ ಓದಿ: ತುನಿಶಾ ಶರ್ಮಾ ಅಂತ್ಯಸಂಸ್ಕಾರ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ