ನಾಗಶೇಖರ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಪಾದರಾಯ' ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ. ಟೈಟಲ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾವನ್ನು ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡಲಿದ್ದಾರೆ. ನಿನ್ನೆಯಷ್ಟೇ ನಿರ್ದೇಶಕ ಚಂದ್ರಚೂಡ್ ಹಾಗೂ ನಟ ನಾಗಶೇಖರ್ ಅವರು ಹನುಮನ ಮಾಲೆ ಧರಿಸುವ ಮೂಲಕ ಪಾದರಾಯ ಸಿನಿಮಾದ ಕೆಲಸಗಳಿಗೆ ಚಾಲನೆ ನೀಡಿದ್ದಾರೆ.
ನಟಿಯಾಗಲು ಸಜ್ಜಾದ ಗಾಯಕಿ ಮಂಗ್ಲಿ: ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಗಾಯಕಿ ಮಂಗ್ಲಿ ಅವರು ಈ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಗಾಯಕಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿರುವ ಮಂಗ್ಲಿ ಮೊದಲ ಬಾರಿಗೆ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹಾಗೂ ನಟ ನಾಗಶೇಖರ್ ಅವರು ಗಾಯಕಿ ಮಂಗ್ಲಿ ಜೊತೆ ಮಾತುಕತೆ ನಡೆಸಿದ್ದು, ಗಾಯಕಿ ಮಂಗ್ಲಿ ಕೂಡ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಆರ್ ಚಂದ್ರು ನಿರ್ಮಾಣದ ಚಿತ್ರ: ಸದ್ಯ ವೇದ ಸಿನಿಮಾದ ಗಿಲ್ಲಕ್ಕೋ ಹಾಡಿನ ಮೂಲಕ ಮನೆ ಮಾತಾಗಿರುವ ಮಂಗ್ಲಿ, ತ್ರಿಬಲ್ ರೈಡಿಂಗ್, ವಿಕ್ರಾಂತ್ ರೋಣ, ದಿಪ್ ಪಸಂದ್, ರಾಬರ್ಟ್ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳ ಹಾಡಿಗೆ ದನಿಯಾಗಿದ್ದಾರೆ. ಅಷ್ಟೂ ಹಾಡುಗಳು ಸೂಪರ್ ಹಿಟ್ ಎನ್ನುವುದು ವಿಶೇಷ. ಇನ್ನು ಪಾದರಾಯ ಸಿನಿಮಾ ತಂಡದಲ್ಲಿ ಮಹತ್ವದ ಬದಲಾವಣೆಯೊಂದು ಆಗಿದೆ. ಈ ಹಿಂದೆ ಈ ಚಿತ್ರವನ್ನು ನಿರ್ಮಾಪಕ ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಜಾಕ್ ಮಂಜು ಈ ಸಿನಿಮಾದಿಂದ ದೂರ ಸರಿದಿದ್ದು, ನಿರ್ದೇಶಕ ಆರ್ ಚಂದ್ರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪಾದರಾಯ ಶೂಟಿಂಗ್: ಚಕ್ರವರ್ತಿ ಚಂದ್ರಚೂಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಲಿರುವ ಪಾದರಾಯ ಚಿತ್ರದಲ್ಲಿ ಮೈನಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಚಿತ್ರೀಕರಣಕ್ಕೆ ಹೊರಡುವ ಮುನ್ನ ನಾಯಕ ನಟ ನಾಗಶೇಖರ್ 42 ದಿನಗಳ ಕಟ್ಟುನಿಟ್ಟಿನ ವ್ರತ ಕೈಗೊಂಡಿದ್ದಾರೆ. ನಿನ್ನೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರಿಂದ ಹನುಮ ಮಾಲೆ ಹಾಕಿಸಿಕೊಂಡಿರುವ ನಾಗಶೇಖರ್ 42 ದಿನಗಳ ಕಾಲ ಅಂಜನಾದ್ರಿ ಬೆಟ್ಟದಲ್ಲಿ ವ್ರತ ಆಚರಿಸಲಿದ್ದಾರೆ. ಈ ವ್ರತ ಮುಗಿದ ಬಳಿಕ ಪಾದರಾಯ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.
ನೈಜ ಘಟನೆ ಆಧಾರಿತ ಚಿತ್ರ: ಪಾದರಾಯ ಚಿತ್ರ 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ. ಆರು ರಾಜ್ಯಕ್ಕೆ ಸಂಬಂಧಿಸಿದ ಘಟನೆ ಇದಾಗಿದ್ದು, ಯೂನಿವರ್ಸಲ್ ಸಬ್ಜೆಕ್ಟ್ ಆಗಿರೋದ್ರಿಂದ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರುತ್ತಿದೆ. ಅಂಜನಾದ್ರಿ ಬೆಟ್ಟದ ಸುತ್ತಮುತ್ತ ಈ ಚಿತ್ರದ ಕಥೆ ನಡೆಯಲಿದೆ.
ಇದನ್ನೂ ಓದಿ: ವೇದಿಕೆ ಮೇಲೆಯೇ ಕಣ್ಣೀರಿಟ್ಟ 'ಶಾಕುಂತಲಾ' .. ವ್ಯಂಗ್ಯ ಪೋಸ್ಟ್ಗಳಿಗೆ ಬೇಸತ್ತು ಸಮಂತಾ ಹೇಳಿದ್ದೇನು?
ನಿರ್ದೇಶಕ ಆರ್ ಚಂದ್ರು ಪಾದರಾಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ನಾಗಶೇಖರ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ತಮಿಳು ಚಿತ್ರರಂಗದ ಹೆಸರಾಂತ ಸಂಕಲನಕಾರ ಆಂಟೋನಿ ಚಿತ್ರದ ಸಂಕಲನ ಜವಾಬ್ದಾರಿ ಹೊತ್ತಿದ್ದು, ಸತ್ಯ ಹೆಗಡೆ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದೆ.
ಇದನ್ನೂ ಓದಿ: ‘ಪಾದರಾಯ’ ಚಿತ್ರಕ್ಕಾಗಿ 42 ದಿನಗಳ ಕಟ್ಟುನಿಟ್ಟಿನ ವ್ರತ ಮಾಡುತ್ತಿರುವ ನಾಗಶೇಖರ್!
ಚಕ್ರವರ್ತಿ ಚಂದ್ರಚೂಡ್ ಹಾಗೂ ನಿರ್ದೇಶಕ ನಾಗಶೇಖರ್ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ. ನಾಗಶೇಖರ್ ಜೊತೆ ಮಂಗ್ಲಿ ನಟಿಸಲಿದ್ದು ಈ ಸಿನಿಮಾದ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ನಿರೀಕ್ಷೆ ಹುಟ್ಟಿಸಿದೆ.