ಮುಂಬೈ: ಬಾಲಿವುಡ್ನ ಪ್ರಣಯ ಪಕ್ಷಿಗಳಲ್ಲಿ ಒಂದಾಗಿದ್ದ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಸಂಬಂಧಕ್ಕೆ ಅಧಿಕೃತವಾಗಿ ಮದುವೆಯ ಮುದ್ರೆ ಒತ್ತಿದ್ದಾರೆ. ಕಳೆದ ವಾರ ಅಂದ್ರೆ, ಫೆ. 7ರಂದು ರಾಜಸ್ಥಾನದ ಜೈಸ್ಮೇರ್ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿ ವಿವಾಹವಾಗಿದ್ದ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ಭಾನುವಾರ(ಫೆ. 12ರಂದು) ಮುಂಬೈನಲ್ಲಿ ಅದ್ಧೂರಿಯಾಗಿ ಜರುಗಿತು. ಇದಕ್ಕೂ ಮುನ್ನ ಫೆ. 9ರಂದು ದೆಹಲಿಯಲ್ಲಿ ಕುಟುಂಬಸ್ಥರಿಗೆ ಮಾತ್ರ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೀಗ ಸಿನಿ ಕ್ಷೇತ್ರದ ಮಂದಿ ಮತ್ತು ಉದ್ಯಮಿಗಳಿಗೆ ಮುಂಬೈನಲ್ಲಿ ಆರತಕ್ಷತೆ ನಡೆಸಲಾಗಿತ್ತು. ಬಾಲಿವುಡ್ನ ನಟ-ನಟಿಯರು ಈ ಈ ಆರತಕ್ಷತೆ ಮೆರಗನ್ನು ಹೆಚ್ಚಿಸಿದ್ದಾರೆ.
ದೆಹಲಿ ಆರತಕ್ಷತೆಯಲ್ಲಿ ಸಿಂಪಲ್ ಲುಕ್ ಮೂಲಕ ಕಂಗೊಳಿಸಿದ್ದ ಈ ಜೋಡಿ ಮುಂಬೈನಲ್ಲಿ ಇಂಡೋ ವೆಸ್ಟರ್ನ್ ಶೈಲಿಯನ್ನು ಆರಿಸಿಕೊಂಡಿದ್ದರು. ನಟಿ ಕಿಯಾರಾ ಕಪ್ಪು ಮತ್ತು ಬಿಳಿ ಬಣ್ಣದ ಗೌನ್ನಲ್ಲಿ ಮಿಂಚಿದ್ದು, ವಜ್ರ ಮತ್ತು ಪಚ್ಚೆಯ ಆಭರಣ ತೊಟ್ಟು ಕಂಗೊಳಿಸಿದರು. ಇನ್ನು ನಟ ಸಿದ್ಧಾರ್ಥ್ ಕೂಡ ಕಪ್ಪು ಬಣ್ಣದ ಸೂಟ್ನಲ್ಲಿ ಗಮನ ಸೆಳೆದರು. ಕಾರ್ಯಕ್ರಮಕ್ಕೆ ಅಭಿಷೇಕ್ ಬಚ್ಚನ್,ಕರೀನಾ ಕಪೂರ್, ಕರಣ್ ಜೋಹರ್, ಅನುಪಮ್ ಖೇರ್, ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಅಶುತೋಷ್ ಗೌರಿಕರ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರ ತಂಡು ನವ ಜೋಡಿಗಳಿಗೆ ಶುಭ ಹಾರೈಸಿದರು.
ಕರೀನಾ ಕಪೂರ್ ಗುಲಾಬಿ ಬಣ್ಣದ ಸೀರೆಯುಟ್ಟು ತಮ್ಮ ಆತ್ಮೀಯ ಸ್ನೇಹಿತ ಮತ್ತು ನಿರ್ದೇಶಕ ಕರಣ್ ಜೋಹರ್ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಡು ಕಂದು ಬಣ್ಣದ ಸೂಟ್ನಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡರೆ ಕಾಜೋಲ್ ಬಿಳಿ ಮತ್ತು ಸಿಲ್ವರ್ ಬಣ್ಣದ ಸೀರೆಯಲ್ಲಿ ಮಿಂಚಿದರು.
ಸಿದ್ಧಾರ್ಥ್ ಮಲ್ಹೋತ್ರಾ ಅವರ ಮೊದಲ ಚಿತ್ರದಲ್ಲಿ ನಟಿಸಿದ್ದ ನಟಿ ಆಲಿಯಾ ಭಟ್ ಅತ್ತೆ ನೀತು ಕಪೂರ್ ಜೊತೆ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದರು. ಆಲಿಯಾಗೆ ಇದೇ ವೇಳೆ ಬ್ರಹ್ಮಾಸ್ತ್ರ ಸಿನಿಮಾ ನಿರ್ದೇಶಕ ಆಯನ್ ಮುಖರ್ಜಿ ಕೂಡ ಸಾಥ್ ನೀಡಿದರು. ಅಭಿಷೇಕ್ ಬಚ್ಚನ್ ಕಪ್ಪು ಬಣ್ಣದ ಸೂಟ್ನಲ್ಲಿ ಮಿಂಚಿದರೆ, ಅನೂಪಮ್ ಖೇರ್ ಕಪ್ಪು ಬಣ್ಣದ ಕುರ್ತಾ ಪೈಜಾಮ್ ತೊಡುವ ಮೂಲಕ ಸಾಂಪ್ರದಾಯಿಕ ಲುಕ್ನಲ್ಲಿ ಕಂಗೊಳಿಸಿದರು.
ನಟಿ ವಿದ್ಯಾಬಾಲನ್ ಕೂಡ ಗಂಡ ಸಿದ್ಧಾರ್ಥ್ ರಾಯ್ ಕಪೂರ್ ಜೊತೆ ಆಗಮಿಸಿ, ನೂತನ ಜೋಡಿಗೆ ಶುಭ ಹಾರೈಸಿದರು. ನಟಿ ರಕುಲ್ ಪ್ರೀತ್ ಸಿಂಗ್ ಗೌನ್ನಲ್ಲಿ ಕಾಣಿಸಿಕೊಂಡರೆ, ವಿಕ್ಕಿ ಕೌಶಲ್ ಸೂಟ್ ಧರಿಸಿ ಕ್ಲಾಸಿಯಾಗಿ ಕಾಣಿಸಿದರು. ರಾಜಸ್ಥಾನದಲ್ಲಿ ನಡೆದಿದ್ದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಹೀದ್ ಕಪೂರ್ ಮತ್ತು ಮೀರಾ ಕಪೂರ್ ಜೋಡಿ ಮುಂಬೈ ಆರತಕ್ಷತೆಯಲ್ಲೂ ಗಮನ ಸೆಳೆದರು. ಉದ್ಯಮಿ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಅಂಬಾನಿ ಕೂಡ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಶೇರ್ಶಾಹ ಸಿನಿಮಾ ಮೂಲಕ ಒಟ್ಟಿಗೆ ನಟಿಸಿದ್ದ ಕಿಯಾರಾ ಮತ್ತು ಸಿದ್ದಾರ್ಥ್ ನಡುವೆ ಪ್ರೀತಿ ಚಿಗುರೊಡೆದಿತ್ತು. ವರ್ಷಗಳಿಂದ ಸಂಬಂಧದಲ್ಲಿರುವ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಗುಟ್ಟನ್ನು ನಟ ಶಾಹೀದ್ ಕಪೂರ್ ಕರಣ್ ಜೋಹರ್ ಅವರ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಬಳಿಕ ತಮ್ಮ ನಡುವಿನ ಸಂಬಂಧವನ್ನು ಇಬ್ಬರು ಬಹಿರಂಗ ಪಡಿಸಿದ್ದರು.
ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ಬಾಲಿವುಡ್ ಜೋಡಿ: ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಿದ್ಧಾರ್ಥ್ ಕಿಯಾರಾ ಮಸ್ತ್ ಡ್ಯಾನ್ಸ್