ಕನ್ನಡ ಚಿತ್ರರಂಗದಲ್ಲಿ ಶ್ವಾನದ ಕಥೆ ಆಧರಿಸಿ ಬಂದ ನಾನು ಮತ್ತು ಗುಂಡ ಹಾಗು 777 ಚಾರ್ಲಿ ಸಿನಿಮಾ ಕೋಟ್ಯಂತರ ಪ್ರೇಕ್ಷಕರ ಮನ ಗೆಲ್ಲುವ ಮೂಲಕ ದಾಖಲೆಗಳನ್ನು ಬರೆದಿವೆ. ಇದೀಗ ಮತ್ತೆ ಶ್ವಾನ ಮತ್ತು ಮನುಷ್ಯ ನಡುವಿನ ಬಾಂಧವ್ಯದ ಕತೆ ಆಧರಿಸಿರುವ ಡವ್ ಮಾಸ್ಟರ್ ಎಂಬ ಚಿತ್ರ ಬರ್ತಿದೆ.
ಪೋಷಕ ಪಾತ್ರಗಳಿಂದ ಬೇಡಿಕೆ ಹೊಂದಿರುವ ತಬಲನಾಣಿ ಹಾಗು ರಾಕಿ ಎಂಬ ಶ್ವಾನ ಮುಖ್ಯಭೂಮಿಕೆಯಲ್ಲಿರುವ ಡವ್ ಮಾಸ್ಟರ್ ಚಿತ್ರದ ಟ್ರೈಲರ್ ಅನ್ನು ಮಾಜಿ ಸಿ ಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಬೈರತಿ ಸುರೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್, ಮಾಜಿ ಅಧ್ಯಕ್ಷರಾದ ಚಿನ್ನೇಗೌಡ, ಕೆ.ವಿ ಚಂದ್ರುಶೇಖರ್, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಟ್ರೈಲರ್ ನೋಡಿ ಶುಭ ಹಾರೈಸಿದರು. ನಿಯತ್ತಿಗೆ ಹೆಸರಾಗಿರುವ ಶ್ವಾನದ ಕಥಾಹಂದರವಿರುವ ಈ ಸಿನಿಮಾವನ್ನು ಎಲ್ಲರೂ ಚಿತ್ರಮಂದಿರದಲ್ಲಿ ಹೋಗಿ ನೋಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಜನರಿಗೆ ಯಾಮಾರಿಸಿ ಬದುಕುವವರನ್ನು ಡವ್ ಮಾಸ್ಟರ್ ಎಂದು ಸಾಮಾನ್ಯವಾಗಿ ಕರೆಯುತ್ತೇವೆ. ಆದರೆ ತಬಲನಾಣಿ ಹಾಗು ರಾಕಿ ಎಂಬ ಶ್ವಾನ ಅಭಿನಯದ ಡವ್ ಮಾಸ್ಟರ್ ಚಿತ್ರ ಕಣ್ಣೀರು ತರಿಸುವ ಪ್ರೀತಿ ವಾತ್ಸಲ್ಯದ ಸಿನಿಮಾ ಆಗಿದೆ. ಮನುಷ್ಯ ಹಾಗೂ ಪ್ರಾಣಿ ನಡುವಿನ ಸಂಬಂಧದ ಮೌಲ್ಯ ತಿಳಿಸುವ ಕಥೆಯಾಗಿರುವ ಚಿತ್ರವನ್ನು ಯುವ ನಿರ್ದೇಶಕ ಆರ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡಿರೋ ಆರ್ಯ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ಈ ಸಿನಿಮಾ ಬಗ್ಗೆ ಮಾತನಾಡಿದ ತಬಲನಾಣಿ, ಕಥೆಯೇ ಹೀರೋ. ಎರಡನೇ ಹೀರೋ ನಮ್ಮ ರಾಕಿ. ನಾನು ನಾಯಿಯನ್ನು ಪ್ರೀತಿಯಿಂದ ಮಗನಂತೆ ಸಾಕಿರುತ್ತೇನೆ. ಕೊನೆಗೆ ಆ ನಾಯಿಯಿಂದ ಕೆಡುಕಾಗುತ್ತದೆ ಎಂದು ತಿಳಿದಾಗ, ನಾನು ಏನು ಮಾಡುತ್ತೇನೆ ಎಂಬುದನ್ನು ನೀವು ಚಿತ್ರದಲ್ಲಿ ನೋಡಬೇಕು. ಎಲ್ಲರೂ ಗಂಡಿಗೆ ಹೆಣ್ಣು ಹುಡುಕಲು ಹೋಗುತ್ತಾರೆ. ನಾವು ಇದರಲ್ಲಿ ನಮ್ಮ ರಾಕಿಗೆ ಕನ್ಯಾನ್ವೇಷಣೆ ಮಾಡುತ್ತೇವೆ. ಉತ್ತಮ ಕಥೆಯ ಸಿನಿಮಾ ಎಂದರು.
ತೆಲುಗು ನಟಿ ಶಕೀಲಾ, ನವೀನ್ ಡಿ ಪಡೀಲ್, ಸುಂದರ್, ಕುರಿ ಪ್ರತಾಪ್, ಮಿತ್ರ, ಕಾಕ್ರೋಜ್ ಸುಧೀ, ಗಿರೀಶ್ ಜತ್ತಿ, ಗೋವಿಂದೇ ಗೌಡ, ಸ್ವಪ್ನ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಶಕೀಪ್ ಅಹ್ಮದ್ ಸಂಗೀತ ನೀಡಿದ್ದು, ಕಿರಣ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಚಿತ್ರರಂಗದಲ್ಲಿ ವಿತರಕರಾಗಿ ಗುರುತಿಸಿಕೊಂಡಿರುವ ಚಾಂದ್ ಪಾಷಾ ಅವರ ಮಗ ರೋಷನ್ ಪಾಷಾ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಹೊಸ ಪ್ರತಿಭೆಗಳು ಹೊತ್ತು ತಂದ ಸಿರಿ ಲಂಬೋದರ ವಿವಾಹ ಟೀಸರ್ಗೆ ರಮೇಶ್ ಅರವಿಂದ್ ಫಿದಾ