ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇಂತಹ ದಿಗ್ಗಜ ನಟರ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್. ಇದೀಗ 'ಪಡ್ಡೆಹುಲಿ' ಸಿನಿಮಾ ಖ್ಯಾತಿಯ ಶ್ರೇಯಸ್ ಮಂಜು ಅವರ ಮುಂದಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಸಿನಿಮಾಗೆ 'ಒಂದ್ಸಲ ಮೀಟ್ ಮಾಡೋಣ' ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗೆ ಚಿಕ್ಕಮಗಳೂರಿನ ಶ್ರೀದೇವಿರಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಶ್ರೇಯಸ್ ಮಂಜು ಹಾಗೂ ತಾರಾ ಅನುರಾಧ ಅವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಸ್ಥಳೀಯ ಶಾಸಕರಾದ ಹೆಚ್ ಡಿ ತಮ್ಮಯ್ಯ ಆರಂಭ ಫಲಕ ತೋರಿದರು. ನಿರ್ಮಾಣ ಸಹಾಯಕ ಮಹದೇವ ಕ್ಯಾಮರಾ ಚಾಲನೆ ಮಾಡಿದರು.

'ಪ್ರೀತಿ' ಕಥೆಯಿದು.. 'ಒಂದ್ಸಲ ಮೀಟ್ ಮಾಡೋಣ' ಚಿತ್ರವು ಪ್ರೀತಿಯ ಜರ್ನಿ ಎಂದು ನಿರ್ದೇಶಕ ಎಸ್.ನಾರಾಯಣ್ ಹೇಳಿದ್ದಾರೆ. ಚಿಕ್ಕಮಗಳೂರಿನಿಂದ ಚಿತ್ರೀಕರಣ ಪ್ರಾರಂಭವಾಗಿ, ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಗೋವಾ ಮುಂತಾದ ಕಡೆ ನಡೆಯಲಿದೆ. ಇದೊಂದು ಟ್ರಾವೆಲಿಂಗ್ ಲವ್ ಸ್ಟೋರಿ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಒಂದು ಲಕ್ಷ ಗಿಡ ನೆಡುವ 'ವೃಕ್ಷದೀಪ' ಅಭಿಯಾನಕ್ಕೆ ಚಾಲನೆ: ಕಿಚ್ಚ ಸುದೀಪ್ ಸಾಥ್
ಚಿತ್ರತಂಡ ಹೀಗಿದೆ.. 'ರಾಣಾ' ಚಿತ್ರದ ಬಳಿಕ ಲವರ್ ಬಾಯ್ ಆಗಿ ಶ್ರೇಯಸ್ ಮಂಜು ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ನಾಯಕಿಯಾಗಿ ಬೃಂದಾ ಆಚಾರ್ ನಟಿಸುತ್ತಿದ್ದಾರೆ. ಇವರ ಜೊತೆ ತಾರಾ ಅನುರಾಧ, ಶರತ್ ಲೋಹಿತಾಶ್ವ, ಸಾಧುಕೋಕಿಲ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ರಂಗಾಯಣ ರಘು, ಪಾವಗಡ ಮಂಜು, ಜಯರಾಮ್, ಸುಜಯ್ ಶಾಸ್ತ್ರಿ, ಗಿರಿ ಮುಂತಾದವರು ತಾರಾ ಬಳಗದಲ್ಲಿದ್ದಾರೆ.
ನಿರ್ದೇಶಕ ಎಸ್.ನಾರಾಯಣ್ ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಈ ಚಿತ್ರಕ್ಕೆ ಜಸ್ಸಿ ಗಿಫ್ಟ್ ಸಂಗೀತ ನೀಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ, ಸಂತು ನೃತ್ಯ ನಿರ್ದೇಶನ ಹಾಗೂ ಆನಂದ್ ಅವರ ಕಲಾ ನಿರ್ದೇಶನ 'ಒಂದ್ಸಲ ಮೀಟ್ ಮಾಡೋಣ' ಚಿತ್ರಕ್ಕಿದೆ.
ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಪಿ.ತ್ಯಾಗರಾಜ್ ಅವರು ಅರ್ಪಿಸುತ್ತಿರುವ ಈ ಚಿತ್ರವನ್ನು ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಸ್.ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬರ್ತೀರೋ 'ಒಂದ್ಸಲ ಮೀಟ್ ಮಾಡೋಣ' ಚಿತ್ರ ಶ್ರೇಯಸ್ ಮಂಜುಗೆ ಒಳ್ಳೆ ಹೆಸರು ತಂದು ಕೊಡಲಿದೆ ಎಂಬ ಭರವಸೆ ಇದೆ.
ಇದನ್ನೂ ಓದಿ: 75ನೇ ಜನ್ಮದಿನದ ಸಂಭ್ರಮದಲ್ಲಿ ನಟ ಅನಂತ್ ನಾಗ್: ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ 'ಅನಂತ ಅಭಿನಂದನೆ'